ಪಾಲಕ್ಕಾಡ್: ಖಾಸಗಿ ಹಣಕಾಸು ವ್ಯವಹಾರ ಸಂಸ್ಥೆಯೊಂದರ ಕಲೆಕ್ಷನ್ ಏಜೆಂಟ್‍ನಿಂದ 30 ಲಕ್ಷ ರೂಪಾಯಿ ದರೋಡೆ ಮಾಡಿರುವ ಪ್ರಕರಣದ ಹಿಂದೆ ಐಸಿಸ್ ನಂಟು ಹೊಂದಿರುವ ಗುಂಪು ಕೈವಾಡವಿದೆ ಎಂದು ಎನ್‍ಐಎ ಹೇಳಿದೆ.
ಕಳೆದ ವರ್ಷ ಏಪ್ರಿಲ್‍ನಲ್ಲಿ ದರೋಡೆ ನಡೆದಿತ್ತು. ಎನ್ ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ವಿಷಯ ತಿಳಿಸಿದೆ. ತ್ರಿಶೂರ್ ಮೂಲದ ಎಂಕೆ ಆಶಿಫ್ ಮತ್ತು ಶಿಯಾಸ್ ಟಿಎಸ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ವರದಿಯಲ್ಲಿ ಎನ್‍ಐಎ ಈ ಆರೋಪ ಮಾಡಿದೆ.
ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಜುಲೈ 2023 ರಲ್ಲಿ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಐಸಿಸ್‍ಗೆ ಸಂಬಂಧಿಸಿದ ಗುಂಪುಗಳು ಸಕ್ರಿಯವಾಗಿವೆ ಎಂಬ ಮಾಹಿತಿಯನ್ನು ಎನ್‍ಐಎ ಪಡೆದಿತ್ತು. ನಂತರದ ತನಿಖೆಯಲ್ಲಿ ಆಶಿಫ್, ಶಿಯಾಜ್, ಸೈಯದ್ ನಬೀಲ್ ಅಹಮದ್, ರಾಯಿಸ್ ಪಿಎ ಮತ್ತು ಜಹೀರ್ ಇಪಿ ಅವರನ್ನು ಬಂಧಿಸಲಾಯಿತು. ಆಶಿಫ್ ಮತ್ತು ಸೈದ್ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರ್ರಂಟ್ ಆಫ್ ಇಂಡಿಯಾದ ಸಕ್ರಿಯ ಕಾರ್ಯಕರ್ತರು.
2008ರಲ್ಲಿ ನಡೆದ ಆರ್‍ಎಸ್‍ಎಸ್ ಮುಖಂಡನ ಹತ್ಯೆಯಲ್ಲೂ ಆಶಿಫ್ ಭಾಗಿಯಾಗಿದ್ದ ಎನ್ನಲಾಗಿದೆ. ಸೈದ್ ಪಾಪ್ಯುಲರ್ ಫ್ರಂಟ್ ನ ವಿವಿಧ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದ. ಬಳಿಕ ಇಬ್ಬರೂ ಕತಾರ್‍ಗೆ ತೆರಳಿದ್ದರು. ಅಲ್ಲಿನ ಇಂಡಿಯನ್ ಫ್ರೆಟರ್ನಿಟಿ ಪೋರಂನಲ್ಲಿಯೂ ಸಕ್ರಿಯವಾಗಿ ಕೆಲಸ ಮಾಡಿದ್ದರು. ಮಂಜೇರಿಯಲ್ಲಿರುವ ಗ್ರೀನ್ ವ್ಯಾಲಿ ಟ್ರೈನಿಂಗ್ ಸೆಂಟರ್ ನಿಂದಲೂ ಶಸ್ತ್ರಾಸ್ತ್ರ ತರಬೇತಿ ಪಡೆದಿರುವುದು ಎನ್ ಐಎ ತನಿಖೆಯಿಂದ ಬೆಳಕಿಗೆ ಬಂದಿದೆ.
ಕತಾರ್‍ನಲ್ಲಿದ್ದಾಗ, ಅವರು ಕೇರಳೀಯನಾದ ಶಿಹಾಸ್‍ನೊಂದಿಗೆ ಸಂಬಂಧವನ್ನು ಸ್ಥಾಪಿಸಿದ್ದರು. ಶಿಹಾಜ್ ಆಫ್ಘಾನಿಸ್ತಾನದ ಐಎಸ್ ಗುಂಪಿನ ಸದಸ್ಯ. ಆಶಿಫ್ ಮತ್ತು ಸಯೀದ್ ಸಿರಿಯಾ ಮತ್ತು ಅಫ್ಘಾನಿಸ್ತಾನದಲ್ಲಿ ಐಸಿಸ್ ಗುಂಪಿಗೆ ಸೇರಲು ಪ್ರಯತ್ನಿಸಿದ್ದರು. ಆದರೆ ಅನೇಕ ಅಡೆತಡೆಗಳಿಂದ ಅವರಿಗದು ಸಾಧ್ಯವಾಗಿರಲಿಲ್ಲ. ಇದರೊಂದಿಗೆ ಕೇರಳಕ್ಕೆ ಮರಳಿದರು. ಐಎಸ್ ನ ಚಟುವಟಿಕೆಗಳನ್ನು ಇಲ್ಲಿ ಸಕ್ರಿಯಗೊಳಿಸುವುದು ಅವರ ಯೋಜನೆಯಾಗಿತ್ತು.
ಅವರು ಕೇರಳಕ್ಕೆ ಬಂದು ಐಸಿಸ್ ಗುಂಪನ್ನು ರಚಿಸಲು ನಿರ್ಧರಿಸಿದರು. ಈ ಗುಂಪಿಗೆ ಮೂರನೇ ಆರೋಪಿ ಶಿಯಾಸ್ ಮತ್ತು ನಾಲ್ಕನೇ ಆರೋಪಿ ರೈಸ್ ನನ್ನು ಕೂಡ ಸೇರಿಸಲು ಯತ್ನಿಸಿದ್ದರು. ಆಶಿಫ್ ರಾಜ್ಯದಲ್ಲಿ ಐಎಸ್ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಟೆಲಿಗ್ರಾಮ್ ಚಾನೆಲ್ ಅನ್ನು ಸಹ ಪ್ರಾರಂಭಿಸಿದ್ದರು.
ಟೆಲಿಗ್ರಾಮ್ ಗುಂಪಿನ ಹೆಸರು 'ಪೆಟ್ ಲವರ್ಸ್'. ಎನ್‍ಐಎ ವರದಿಯ ಪ್ರಕಾರ, ಯುವಕರನ್ನು ಈ ಗುಂಪಿಗೆ ಸೇರಿಸಿಕೊಳ್ಳಲಾಯಿತು ಮತ್ತು ಅವರು ಈ ಗುಂಪಿನ ಮೂಲಕ ಐಎಸ್ ಸಿದ್ಧಾಂತವನ್ನು ಹರಡಿದರು. "ಐಎಸ್ ಚಟುವಟಿಕೆಗಳಿಗೆ ಹಣ ಸಂಗ್ರಹಿಸಲು ಅವರು ದೇವಾಲಯಗಳು ಮತ್ತು ಪ್ರಮುಖ ವ್ಯಕ್ತಿಗಳನ್ನು ಲೂಟಿ ಮಾಡಲು ಯೋಜಿಸಿದ್ದರು. ಈ ಸಂಚಿನ ಭಾಗವಾಗಿ, ಅವರು 20 ಏಪ್ರಿಲ್ 2023 ರಂದು ಇಂಡಾಲ್ ಮನಿ ಸಂಗ್ರಹ ಏಜೆಂಟ್ ಪ್ರಶಾಂತ್ ಮೇಲೆ ದಾಳಿ ಮಾಡಿ 30 ಲಕ್ಷ ದರೋಡೆ ಮಾಡಿದ್ದಾರೆ,' ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಜಾಮೀನು ನಿರಾಕರಿಸುವ ನ್ಯಾಯಾಲಯದ ಆದೇಶದ ಪ್ರಕಾರ, ಈ ಗುಂಪಿನ ಗುರಿ ಅನ್ಯಧರ್ಮೀಯರಿಂದ ಸಂಪತ್ತನ್ನು ವಶಪಡಿಸಿಕೊಳ್ಳುವುದು ಮತ್ತು 'ಹಿಜ್ರಾ' ನಡೆಸುವುದು ಹಾಗೂ ಅದಕ್ಕಾಗಿ ಅವರು ಪ್ರಮುಖ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಲು ಸಂಚು ರೂಪಿಸಿದ್ದರು.