ದಾಂತೇವಾಡ: ಛತ್ತೀಸಗಢದ ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಟ್ಟಾರಣ್ಯದಲ್ಲಿ ಭದ್ರತಾ ಪಡೆಗಳು ಸುಮಾರು 48 ತಾಸು ನಡೆಸಿದ ಕಾರ್ಯಾಚರಣೆ ಯಲ್ಲಿ ಹತರಾದ ನಕ್ಸಲರ ಸಂಖ್ಯೆ 31ಕ್ಕೆ ತಲುಪಿದೆ.
ಎನ್‌ಕೌಂಟರ್ ನಡೆದ ಸ್ಥಳದಿಂದ ಶುಕ್ರವಾರ 28 ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಭದ್ರತಾ ಪಡೆಗಳು ಮತ್ತು ನಕ್ಸಲಯರ ನಡುವೆ ಗುಂಡಿನ ಚಕಮಕಿ ಆರಂಭವಾಗಿತ್ತು. ನೆಂದೂರು ಮತ್ತು ತುಳುತುಳಿ ಗ್ರಾಮಗಳ ನಡುವಿನ ಅರಣ್ಯದಲ್ಲಿ ಸಂಜೆ ಚಕಮಕಿ ಅಂತ್ಯಗೊಂಡಿತ್ತು. ದಾಂತೇವಾಡ ಮತ್ತು ನಾರಾಯಣಪುರದ ಜಿಲ್ಲಾ ಮೀಸಲು ಗಾರ್ಡ್‌ನ (ಡಿಆರ್‌ಜಿ) ಸುಮಾರು 1,500 ಯೋಧರು ಹಾಗೂ ವಿಶೇಷ ಕಾರ್ಯಪಡೆ ಯೋಧರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅತ್ಯಂತ ಪ್ರಯಾಸಕರ ಮಾರ್ಗವನ್ನು ಕ್ರಮಿಸಿ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹತರಾದ ನಕ್ಸಲರ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ ಪ್ರಾಥಮಿಕ ತನಿಖೆಯಲ್ಲಿ, ಮೃತರೆಲ್ಲರೂ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಕಂಪನಿ ಸಂಖ್ಯೆ 6ರ ಪ್ಲಟೂನ್ 16 ಮತ್ತು ಮಾವೋವಾದಿಗಳ ಪೂರ್ವ ಬಸ್ತಾರ್ ವಿಭಾಗಕ್ಕೆ ಸೇರಿದವರು ಎನ್ನುವುದು ಗೊತ್ತಾಗಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರರಾಜ್ ಅವರು ತಿಳಿಸಿದ್ದಾರೆ.
ಗುಂಡಿನ ಚಕಮಕಿ ವೇಳೆ ನಕ್ಸಲರು ಸಿಡಿಸಿದ ಶೆಲ್ ಸ್ಫೋಟದಲ್ಲಿ ಯೋಧರೊಬ್ಬರು ಗಾಯಗೊಂಡಿದ್ದಾರೆ. ದಟ್ಟ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದ ಕೆಲವು ಸ್ಥಳಗಳಲ್ಲಿ ನಕ್ಸಲರ ಪೋಸ್ಟರ್‌ಗಳು ಭಾರಿ ಪ್ರಮಾಣದಲ್ಲಿ ಕಂಡುಬಂದಿವೆ ಎಂದು ತಿಳಿಸಿದ್ದಾರೆ.