ಪಟ್ನಾ: ಬಿಹಾರದಲ್ಲಿ ನಕಲಿ ಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಸಿವಾನ್ ಮತ್ತು ಸಾರಣ್ ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿತ್ತು. ಇಂದು (ಶನಿವಾರ) ಗೋಪಾಲ್‌ಗಂಜ್ ಜಿಲ್ಲೆಯ ಬೈಕುಂತ್‌ಪುರದಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈವರೆಗೆ ಸಿವಾನ್‌ನಲ್ಲಿ 28 ಹಾಗೂ ಸಾರಣ್‌ನಲ್ಲಿ 7 ಜನರು ಸಾವಿಗೀಡಾಗಿದ್ದಾರೆ. ಮದ್ಯ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿರುವ 25 ಜನರಿಗೆ ಎರಡೂ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ' ಎಂದು ಡಿಐಜಿ ತಿಳಿಸಿದ್ದಾರೆ.
'ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧವು ಸಮರ್ಪಕವಾಗಿ ಜಾರಿಯಾಗಿಲ್ಲ. ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಬಹುದೊಡ್ಡ ಭ್ರಷ್ಟಾಚಾರದಲ್ಲಿ ತೊಡಗಿದೆ. ಏಕೆಂದರೆ ಅಕ್ರಮವಾಗಿ ಮದ್ಯ ಮಾರಾಟ ದಂಧೆ ನಡೆಸುತ್ತಿದ್ದು, ಇದರಿಂದ ಬರುವ ಹಣವು ನೇರವಾಗಿ ಜೆಡಿಯು ನಾಯಕರಿಗೆ ತಲುಪುತ್ತದೆ ಎಂದು ಆರ್‌ಜೆಡಿಯು ನಾಯಕ ತೇಜಸ್ವಿ ಯಾದವ್' ವಾಗ್ದಾಳಿ ನಡೆಸಿದ್ದಾರೆ.
ಬಿಹಾರ ಸರ್ಕಾರ 2016ರ ಏಪ್ರಿಲ್ 5ರಂದು ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧ ಜಾರಿಗೊಳಿಸಿತು. ಇದರಿಂದಾಗಿಯೇ ರಾಜ್ಯದಲ್ಲಿ ಅಕ್ರಮವಾಗಿ ನಕಲಿ ಮದ್ಯ ತಯಾರಿಕೆ ಹಾಗೂ ಸೇವನೆಯಿಂದ ಜನರು ಸಾವಿಗೀಡಾಗುತ್ತಿದ್ದಾರೆ. ನಿಷೇಧವು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ವಿಪಕ್ಷಗಳು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದಿವೆ.