ಲಖನೌ: ಅಮೃತಸರದಿಂದ ಲಖನೌಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನ ( IndiGo flight ) ಇದ್ದಕ್ಕಿದ್ದಂತೆ ಗಾಳಿಯಲ್ಲಿ ಮೂರು ಬಾರಿ ಅಲುಗಾಡಿದ ಆತಂಕಕಾರಿ ಘಟನೆ ನಡೆದಿದೆ. ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಸಂಭವನೀಯ ಅನಾಹುತವೊಂದು ತಪ್ಪಿದಂತಾಗಿದೆ.
ಘಟನೆಯ ವಿವರಕ್ಕೆ ಬರುವುದಾದರೆ, ಇಂಡಿಗೋ ವಿಮಾನ 6E 6165 ಸೋಮವಾರ (ಅ.08) ಅಮೃತಸರ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಯಿತು.
ಅಂದಹಾಗೆ ಇಂಡಿಗೋ ವಿಮಾನ ಅಮೃತಸರದಿಂದ ಮಧ್ಯಾಹ್ನ 12.19 ಕ್ಕೆ ಹೊರಟಿತು. ಮಧ್ಯಾಹ್ನ 1.55ಕ್ಕೆ ಅಮೌಸಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ನಿವೃತ್ತ ರೈಲ್ವೆ ಅಧಿಕಾರಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಅವರು ತಮ್ಮ ಪತ್ನಿ ಸಾಧನಾ ಅವರೊಂದಿಗೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಇದ್ದಕ್ಕಿದ್ದಂತೆ ವಿಮಾನವು ಬಹಳ ಎತ್ತರದಿಂದ ಕೆಳಗೆ ಬಂದಿತು, ನಂತರ ಅದನ್ನು ನೇರವಾಗಿ ಮೇಲಕ್ಕೆ ಎತ್ತಲಾಯಿತು. ಮೂರು ಬಾರಿ ಈ ರೀತಿ ಮಾಡಲಾಗಿದ್ದು, ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಅಲ್ಲದೆ, ಕಿರುಚಲು ಪ್ರಾರಂಭಿಸಿದರು ಮತ್ತು ಮಹಿಳೆಯರು ಅಳಲು ಪ್ರಾರಂಭಿಸಿದರು ಎಂದು ಬ್ರಿಜೇಶ್ ಕುಮಾರ್ ತಿಳಿಸಿದ್ದಾರೆ.
ಈ ಘಟನೆಯಿಂದ ಅನೇಕ ಪ್ರಯಾಣಿಕರು ಅಸ್ವಸ್ಥರಾದರು. ಅಲ್ಲದೆ, ಒಂದು ಕ್ಷಣ ಸಾವಿನ ಬಳಿ ಹೋಗಿ ಬಂದೆವು ಎಂದು ಹೇಳಿದ್ದಾರೆ. ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಆದರೆ, ಪೈಲಟ್ ಧೈರ್ಯದಿಂದ ವಿಮಾನದ ವೇಗ ಮತ್ತು ದಿಕ್ಕನ್ನು ಬದಲಿಸಿ ಅಪಘಾತದ ಸುಳಿಯಿಂದ ವಿಮಾನವನ್ನು ರಕ್ಷಣೆ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹೊರತೆಗೆದರು. ಮಧ್ಯಾಹ್ನ 1.55ಕ್ಕೆ ವಿಮಾನ ಲಖನೌ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿದಾಗ, ವಿಮಾನಯಾನ ಆಡಳಿತವು ತಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತದೆ ಎಂದು ಪ್ರಯಾಣಿಕರು ನಿರೀಕ್ಷಿಸಿದ್ದರು. ಆದರೆ, ಅವರ ಕ್ಯಾರೆ ಎನ್ನಲಿಲ್ಲ ಎಂದು ಪ್ರಯಾಣಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.