HEALTH TIPS

ಒಡಿಶಾದಲ್ಲಿ 3 ಲಕ್ಷ ಜನರ ಸ್ಥಳಾಂತರ: ಸಿಎಂ ಮಾಝಿ

 ಭುವನೇಶ್ವರ: ರಾಜ್ಯದ ಕರಾವಳಿಯಲ್ಲಿ 'ಡಾನಾ' ಚಂಡಮಾರುತ ಸೃಷ್ಟಿಸಬಹುದಾದ ಅವಾಂತರಗಳನ್ನು ಪರಿಗಣಿಸಿ, ಮುನ್ನೆಚ್ಚರಿಕೆ ದೃಷ್ಟಿಯಿಂದ 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಬುಧವಾರ ಸಂಜೆಯೊಳಗೆ ಸ್ಥಳಾಂತರಿಸಲಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ತಿಳಿಸಿದ್ದಾರೆ.

ಕರಾವಳಿಯಲ್ಲಿರುವ ಭಿತರ್‌ಕನಿಕಾ ರಾಷ್ಟ್ರೀಯ ಉದ್ಯಾನ ಮತ್ತು ಧಾಮರಾ ಬಂದರು ಪ್ರದೇಶಗಳಿಗೆ 'ಡಾನಾ' ಶುಕ್ರವಾರ ಅಪ್ಪಳಿಸುವ ಸಾಧ್ಯತೆ ಇದೆ. ರಾಜ್ಯದ ಅರ್ಧದಷ್ಟು ಜನರು ಇದರ ಪರಿಣಾಮ ಎದುರಿಸುವ ಆತಂಕವಿದೆ.

'3 ಜಿಲ್ಲೆಗಳು ಗಂಭೀರ ಪರಿಣಾಮಗಳಿಗೆ ತುತ್ತಾಗುವ ಆತಂಕವಿದೆ. ಅಪಾಯ ವಲಯದಲ್ಲಿರುವ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಗುರಿ ಹಾಕಿಕೊಂಡಿರುವ 10 ಲಕ್ಷ ಜನರ ಪೈಕಿ ಇದುವರೆಗೆ ಶೇ 30 ರಷ್ಟು ಜನರನ್ನು ಸ್ಥಳಾಂತರಿಸಲಾಗಿದೆ. ಉಳಿದವರನ್ನು ಗುರುವಾರ ಬೆಳಿಗ್ಗೆ 11ರ ಹೊತ್ತಿಗೆ ಸ್ಥಳಾಂತರಿಸಲಾಗುವುದು' ಎಂದು ಸಿಎಂ ಬುಧವಾರ ರಾತ್ರಿ ಹೇಳಿದ್ದಾರೆ.

'ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ' ಎಂದು ಭರವಸೆ ನೀಡಿದ್ದಾರೆ.

ಚಂಡಮಾರುತ ನಿರ್ವಹಣೆ ಸಲುವಾಗಿ ಹಲವು ಜಿಲ್ಲೆಗಳಿಗೆ ಸಚಿವರು ಹಾಗೂ ಅನುಭವಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.

ಕೇಂದ್ರಪದ, ಭದ್ರಕ್‌, ಬಾಲೇಶ್ವರ, ಜಗತ್‌ಸಿಂಗಪುರ್, ಕಟಕ್‌ ಹಾಗೂ ಪುರಿ ಜಿಲ್ಲೆಗಳು ಹೆಚ್ಚಿನ ಪರಿಣಾಮಕ್ಕೆ ತುತ್ತಾಗುವ ಸಾಧ್ಯತೆ ಇದೆ. ಚಂಡಮಾರುತ ಪಥ ಬದಲಿಸಿದರೆ, ಇತರ ಜಿಲ್ಲೆಗಳಿಗೂ ಹಾನಿಯಾಗಬಹುದು. ಸರ್ಕಾರ ಅದಕ್ಕೂ ಸಜ್ಜಾಗಿದೆ ಎಂದೂ ಹೇಳಿದ್ದಾರೆ.

14 ಜಿಲ್ಲೆಗಳ ಸುಮಾರು 10,60,336 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಗುರಿಯನ್ನು ಸರ್ಕಾರ ಮಂಗಳವಾರ ನಿಗದಿಪಡಿಸಿದೆ.

ಸದ್ಯಕ್ಕೆ, ಚಂಡಮಾರುತದ ಪರಿಣಾಮ ಎದುರಿಸಲಿರುವ ಕರಾವಳಿ ಭಾಗದ ಮೇಲೆ ಗಮನ ನೆಟ್ಟಿದ್ದೇವೆ. ಅಶ್ರಯ ಶಿಬಿರಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries