ನವದೆಹಲಿ: ರಷ್ಯಾದಲ್ಲಿ ನಿರ್ಮಿಸಲಾದ ಒಂದು ಯುದ್ಧ ನೌಕೆ ಸೇರಿ ನಾಲ್ಕು ಮುಂಚೂಣಿ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಮುಂದಿನ ಎರಡು ತಿಂಗಳೊಳಗೆ ಸೇನೆಗೆ ಸೇರ್ಪಡೆ ಮಾಡಲು ಭಾರತೀಯ ನೌಕಾಪಡೆ ಸಜ್ಜಾಗಿದೆ.
ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಪ್ರಾಬಲ್ಯ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ದೇಶಿಯವಾಗಿ ಸಿದ್ಧಪಡಿಸಿದ, ನಾಲ್ಕನೆಯ ಅಣುಶಕ್ತಿ ಚಾಲಿತ, ಗುರಿ ನಿರ್ದೇಶಿತ ಕ್ಷಿಪಣಿಗಳ ಜಲಾಂತರ್ಗಾಮಿ ನೌಕೆಯ (ಎಸ್‌ಎಸ್‌ಬಿಎನ್) ಪರೀಕ್ಷಾರ್ಥ ಚಾಲನೆಯ ಸಂದರ್ಭದಲ್ಲಿಯೇ ಈ ಹೊಸ ಯುದ್ಧ ನೌಕೆಗಳು ಮತ್ತು ದೇಶೀಯವಾಗಿ ನಿರ್ಮಿಸಲಾದ ಪರಮಾಣು ಚಾಲಿತ ದಾಳಿಯ ಎರಡು ಜಲಾಂತರ್ಗಾಮಿ ನೌಕೆಗಳನ್ನು (ಎಸ್‌ಎಸ್‌ಎನ್) ಸೇರ್ಪಡೆ ಮಾಡಲು ಅನುಮೋದನೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಷ್ಯಾ ನಿರ್ಮಿಸಿರುವ ಯುದ್ಧ ನೌಕೆ ತುಶೀಲ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಸೆಂಬರ್‌ನಲ್ಲಿ ಕೈಗೊಳ್ಳಲಿರುವ ಮಾಸ್ಕೊ ಭೇಟಿಯ ಸಂದರ್ಭ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ ಎಂದು ನೌಕಾಪಡೆಯ ಉಪ ಮುಖ್ಯಸ್ಥ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಹೇಳಿದ್ದಾರೆ.
'ನೌಕೆ ಬಳಕೆಗೆ ಸಂಬಂಧಿಸಿದ ಎಲ್ಲ ಪ್ರಯೋಗಗಳು ಪೂರ್ಣಗೊಂಡಿವೆ. ನೌಕೆಯು ಕಾರ್ಯಾಚರಿಸಲು ಸಿದ್ಧವಾಗಿದೆ' ಎಂದು ಅವರು ಪತ್ರಿಕಾಗೋಷ್ಠಿಯ ನೇಪಥ್ಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
8 ವರ್ಷಗಳ ಹಿಂದಿನ ಒಪ್ಪಂದ
ನಾಲ್ಕು ಯುದ್ಧ ನೌಕೆಗಳ ನಿರ್ಮಾಣ ಒಪ್ಪಂದವನ್ನು ಭಾರತವು ರಷ್ಯಾ ಜತೆಗೆ 2016ರಲ್ಲಿ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ, ಎರಡು ನೌಕೆಗಳು ರಷ್ಯಾದ ಹಡಗುಕಟ್ಟೆಯಲ್ಲಿ ಮತ್ತು ಇನ್ನೆರಡು ಗೋವಾ ಹಡಗುಕಟ್ಟೆಯಲ್ಲಿ ನಿರ್ಮಾಣವಾಗುತ್ತವೆ. ರಷ್ಯಾ ನಿರ್ಮಿತ ಎರಡು ಹಡಗುಗಳಲ್ಲಿ ತುಶೀಲ್ ಮೊದಲನೆಯದು. ಇನ್ನೊಂದು ನೌಕೆ 'ತಮಾಲ್' ಅನ್ನು ನಂತರದಲ್ಲಿ ರಷ್ಯಾ ಪೂರೈಸಲಿದೆ.
ಕಳೆದ ವಾರ ದೇಶದ ನಾಲ್ಕನೇ ಎಸ್‌ಎಸ್‌ಬಿಎನ್ ಕಾರ್ಯಾರಂಭ ಮಾಡಿರುವ ಕುರಿತು ಪ್ರತಿಕ್ರಿಯೆ ಕೇಳಿದಾಗ, 'ಎಸ್‌ಎಸ್‌ಬಿಎನ್ ಕಾರ್ಯಕ್ರಮ ಯಶಸ್ವಿಯಾಗಿದೆ. ಎರಡು ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಲಾಗಿದೆ' ಎಂದು ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಹೇಳಿದರು.
ಮೊದಲ ಎರಡು, ಪರಮಾಣು-ಚಾಲಿತ ಗುರಿ ನಿರ್ದೇಶಿತ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳಾದ ಐಎನ್‌ಎಸ್ ಅರಿಹಂತ್ ಮತ್ತು ಐಎನ್‌ಎಸ್ ಅರಿಘಾಟ್ ಕಾರ್ಯಾರಂಭ ಮಾಡಿವೆ. ಎಸ್4 ಮತ್ತು ಎಸ್4* ಹೆಸರಿನ ಇನ್ನೆರಡು ಜಲಾಂತಾರ್ಗಾಮಿ ನೌಕೆಗಳನ್ನು ಸಮುದ್ರಕ್ಕೆ ಪ್ರಯೋಗಾರ್ಥ ಇಳಿಸಲಾಗಿದ್ದು, ಇವು ಕಾರ್ಯಾರಂಭಕ್ಕೆ ಕೆಲವು ವರ್ಷ ತೆಗೆದುಕೊಳ್ಳಬಹುದು.
ಅ.28-29 ರಂದು 'ಸ್ವಾವಲಂಬನ್':
ನೌಕಾಪಡೆಯು ತನ್ನ ಸಾಮರ್ಥ್ಯದ ಕೊರತೆಗಳನ್ನು ನೀಗಿಸಿಕೊಳ್ಳುವ ಜತೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದುವ ಯತ್ನದಲ್ಲಿದೆ ಎಂದು ವೈಸ್ ಅಡ್ಮಿರಲ್ ಸ್ವಾಮಿನಾಥನ್ ಅವರು ನೌಕಾಪಡೆಯ ವಾರ್ಷಿಕ ಟೆಕ್ ಸಮ್ಮೇಳನಕ್ಕೆ ಮುನ್ನಾ ತಿಳಿಸಿದರು.
'ಸ್ವಾವಲಂಬನ್' ಸಮ್ಮೇಳನ ಇದೇ 28-29 ರಂದು ದೆಹಲಿಯಲ್ಲಿ ನಡೆಯಲಿದ್ದು, ಇದರಲ್ಲಿ ಕೆಲವು ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುತ್ತದೆ.
ಭಾರತೀಯ ನೌಕಾಪಡೆಯು ಕಳೆದ ಎರಡು ವರ್ಷಗಳಲ್ಲಿ, ನವೀನ ತಂತ್ರಜ್ಞಾನಗಳ ಕುರಿತು ಖಾಸಗಿ ಕಂಪನಿಗಳೊಂದಿಗೆ ₹1,194 ಕೋಟಿ ಮೌಲ್ಯದ 22 ಯೋಜನೆಗಳ ಒಪ್ಪಂದಗಳಿಗೆ ಸಹಿ ಹಾಕಿದೆ.
ಶತ್ರುಗಳಿಂದ ಎದುರಾಗಬಹುದಾದ ದಾಳಿ ಮೆಟ್ಟಿನಿಲ್ಲಲು ನೆರವಾಗುವಂತಹ ಸೂಕ್ಷ್ಮ ತಂತ್ರಜ್ಞಾನಗಳ ಬಗ್ಗೆ ನಿಗಾ ಮಾಡಲು ನೌಕಾಪಡೆಯು ಎರಡು ಪ್ರತ್ಯೇಕ ಕಾರ್ಯಪಡೆಗಳನ್ನು ಸಹ ರಚಿಸಿದೆ.