ನವದೆಹಲಿ: ಭಾರತದ ವಿವಿಧ ವಿಮಾನಯಾನ ಸಂಸ್ಥೆಗಳ ಸುಮಾರು 50 ವಿಮಾನಗಳಿಗೆ ಬಾಂಬ್ ಬೆದರಿಕೆಯ ಹುಸಿ ಕರೆಗಳು ಭಾನುವಾರ ಬಂದಿವೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಭಾರತದ ವಿವಿಧ ವಿಮಾನಯಾನ ಸಂಸ್ಥೆಗಳ ಸುಮಾರು 50 ವಿಮಾನಗಳಿಗೆ ಬಾಂಬ್ ಬೆದರಿಕೆಯ ಹುಸಿ ಕರೆಗಳು ಭಾನುವಾರ ಬಂದಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ 14 ದಿನಗಳಲ್ಲಿ ವಿವಿಧ ವಿಮಾನಯಾನ ಸಂಸ್ಥೆಗಳ 350 ವಿಮಾನಗಳಿಗೆ ಇಂತಹ ಕರೆ, ಸಂದೇಶಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಂದಿವೆ.
'15 ವಿಮಾನಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಸಂದೇಶ ಬಂದಿತ್ತು. ಪರಿಶೀಲಿಸಿದಾಗ, ಅದು ಹುಸಿ ಎಂದು ತಿಳಿಯಿತು' ಎಂದು ಅಕಾಸಾ ಏರ್ ಸಂಸ್ಥೆಯು ತಿಳಿಸಿದೆ.
ಇಂಡಿಗೊ ಸಂಸ್ಥೆಯ 18 ಮತ್ತು ವಿಸ್ತಾರಾ ಸಂಸ್ಥೆಯ 17ವಿಮಾನಗಳಿಗೆ ಇಂತಹ ಕರೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.
ಹುಸಿ ಸಂದೇಶಗಳನ್ನು ಕಳುಹಿಸುತ್ತಿರುವವರನ್ನು ಗುರುತಿಸಿ ನಿಗದಿತ ಅವಧಿಯೊಳಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿದೆ.
ಈ ಮಧ್ಯೆ, ಹುಸಿ ಬಾಂಬ್ ಕರೆಗಳ ಪಿಡುಗಿಗೆ ಕಡಿವಾಣ ಹಾಕಲು ಶಾಸನಾತ್ಮಕ ಕ್ರಮ ಜರುಗಿಸುವ ಕುರಿತು ಕೇಂದ್ರ ವಿಮಾನಯಾನ ಸಚಿವಾಲಯ ಚಿಂತನೆ ನಡೆಸುತ್ತಿದೆ.