ತಿರುವನಂತಪುರ: ತಿರುಮಲ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಮಿಶ್ರಣ ವಿವಾದ ಪ್ರಕರಣದ ನಡುವೆಯೇ ಇದೀಗ, ಶಬರಿಮಲೆಯ 'ಅರವಣ ಪಾಯಸ' ಪ್ರಸಾದದಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ ಇರುವುದು ಪತ್ತೆಯಾಗಿದೆ. ಹೀಗಾಗಿ 'ಅರವಣ'ವನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ.
ಪಾಯಸಕ್ಕೆ ಬಳಸಲಾಗುವ ಏಲಕ್ಕಿಯಲ್ಲಿ ಅನುಮತಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಕೀಟನಾಶಕ ಬಳಕೆ ಮಾಡಲಾಗಿದೆ ಎನ್ನುವ ದೂರು ಬಂದಿದ್ದರಿಂದ ಕಳೆದ ಒಂದು ವರ್ಷದಲ್ಲಿ 6.65 ಲಕ್ಷ ಕಂಟೈನರ್‌ನಷ್ಟು 'ಅರವಣ'ವನ್ನು ಬಳಕೆ ಮಾಡದೆ ಬಿಡಲಾಗಿದೆ.
ಇದಾಗ್ಯೂ 'ಅರವಣ' ಸೇವನೆಗೆ ಯೋಗ್ಯವಾಗಿದ್ದರೂ, ₹ 5.5 ಕೋಟಿ ಮೌಲ್ಯದ ದಾಸ್ತಾನನ್ನು ವಿಲೇವಾರಿ ಮಾಡಲು ದೇವಸ್ಥಾನವನ್ನು ನಿರ್ವಹಣೆ ಮಾಡುವ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ನಿರ್ಧರಿಸಿದೆ.
ಈ ಬೃಹತ್ ಪ್ರಮಾಣದ 'ಅರವಣ'ವನ್ನು ವಿಲೇ ಮಾಡುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತ್ತು. ಕಾಡುಪ್ರದೇಶಗಳಲ್ಲಿ ವಿಲೇ ಮಾಡುವ ನಿರ್ಧಾರಕ್ಕೆ ಅಧಿಕಾರಿಗಳಿಂದ ವಿರೋಧ ವ್ಯಕ್ತವಾಗಿತ್ತು.
ಪ್ರಸಾದದ ವಿಲೇವಾರಿಗೆ ಹಲವು ಆಯ್ಕೆಗಳು ಮುಂದೆ ಇದ್ದು, ಭಕ್ತರ ಭಾವನೆಗಳಿಗೆ ಧಕ್ಕೆ ಬರದಂತೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಟಿಡಿಬಿ ಬಯಸಿತ್ತು. ಹೀಗಾಗಿ ಅವುಗಳ ವೈಜ್ಞಾನಿಕ ವಿಲೇವಾರಿಗೆ ಟೆಂಡರ್ ಆಹ್ವಾನಿಸಿತ್ತು.
'ಕೇರಳ ಮೂಲದ ಇಂಡಿಯನ್ ಸೆಂಟಿಫಿಗ್ ಎಂಜಿನಿಯರಿಂಗ್ ಸೆಲ್ಯೂಷನ್ಸ್ ಸಂಸ್ಥೆ ಬಿಡ್ ಗೆದ್ದುಕೊಂಡಿದ್ದು, ಕೆಲಸ ವಹಿಸಲಾಗಿದೆ' ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್ ಪ್ರಶಾಂತ್ ಪ್ರಜಾವಾಣಿಗೆ ತಿಳಿಸಿದರು.
ಹೈದರಾಬಾದ್‌ನಲ್ಲಿರುವ ತಮ್ಮ ವ್ಯವಸ್ಥೆಯಲ್ಲಿ 'ಅರವಣ'ವನ್ನು ವೈಜ್ಞಾನಿಕವಾಗಿ ಗೊಬ್ಬರವನ್ನಾಗಿ ಪರಿವರ್ತಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಮೊದಲು ಕೋಟ್ಟಯಂಗೆ ಸಾಗಿಸಿ, ಬಳಿಕ ಅದನ್ನು ಹೈದರಾಬಾದ್‌ಗೆ ತೆಗೆದುಕೊಂಡು ಹೋಗಲಾಗುತ್ತದೆ. 'ಅರವಣ'ವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಟಿಡಿಬಿಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಕ್ಕಿ ಹಾಗೂ ಬೆಲ್ಲದಿಂದ 'ಅರವಣ'ವನ್ನು ತಯಾರಿಸಲಾಗುತ್ತದೆ. ಇದು ಶಬರಿಮಲೆ ದೇಗುಲದ ಪ್ರಮುಖ ಆದಾಯದ ಮೂಲವೂ ಹೌದು. 'ಅರವಣ'ದ ಮಾರಾಟದಿಂದ ದೇಗುಲ ₹ 147 ಕೋಟಿ ಗಳಿಸಿದ್ದು, ಇದು ದೇಗುಲದ ಒಟ್ಟಾರೆ ಆದಾಯದ ಶೇ 40 ರಷ್ಟು.
ಬಾಲರಾಮ ಪ್ರಾಣ ಪ್ರತಿಷ್ಠಾಪನೆ ವೇಳೆ ಅಯೋಧ್ಯೆಯಲ್ಲಿ ಜೈವಿಕ ಶೌಚಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಇಂಡಿಯನ್ ಸೆಂಟಿಫಿಗ್ ಎಂಜಿನಿಯರಿಂಗ್ ಸೆಲ್ಯೂಷನ್ಸ್ ಸುದ್ದಿಯಲ್ಲಿತ್ತು.