ನವದೆಹಲಿ: ಸ್ಟಾರ್ ಹೆಲ್ತ್ ( Star Health ) ಇನ್ಶುರೆನ್ಸ್ ಕಂಪನಿಯಲ್ಲಿ ಅತಿದೊಡ್ಡ ಡೇಟಾ ಉಲ್ಲಂಘನೆ ( Data Breach ) ಆಗಿದೆ. ಈ ವಿಮಾ ಕಂಪನಿ ( Insurance Company ) ಯ ಗ್ರಾಹಕರ ಡೇಟಾ ಟೆಲಿಗ್ರಾಂನಲ್ಲಿ ಲಭ್ಯವಿದೆ ಎಂದು ಹ್ಯಾಕರ್ ಒಬ್ಬ ಹೇಳಿರುವುದಾಗಿ ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.
ಸುಮಾರು 3.1 ಕೋಟಿಗೂ ಅಧಿಕ ಗ್ರಾಹಕರಿಗೆ ಸಂಬಂಧಸಿದ 7.24 ಟಿಬಿ ಡೇಟಾವನ್ನು 1,50,000 ಡಾಲರ್ (57.5 ಲಕ್ಷ ರೂಪಾಯಿ) ಗೆ ತನ್ನ ವೆಬ್ಸೈಟ್ನಲ್ಲಿ ಹ್ಯಾಕರ್ ಮುಕ್ತವಾಗಿ ಮಾರಾಟಕ್ಕಿಟ್ಟಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ವಿಮಾ ಕಂಪನಿ, ದುರುದ್ದೇಶಪೂರಿತ ಸೈಬರ್ ದಾಳಿಯ ಕುರಿತು ಸಂಪೂರ್ಣ ವಿಧಿವಿಜ್ಞಾನ ತನಿಖೆ ನಡೆಯುತ್ತಿದೆ ಎನ್ನುವ ಮೂಲಕ ಸೈಬರ್ ದಾಳಿಯನ್ನು ಖಚಿತಪಡಿಸಿದೆ.
ಲಭ್ಯವಿರುವ ಡೇಟಾವನ್ನು ಸ್ಟಾರ್ ಹೆಲ್ತ್ ಮತ್ತು ಅಲೈಡ್ ವಿಮಾ ಕಂಪನಿ ಪ್ರಾಯೋಜಿಸಿವೆ ಎಂದು ಹ್ಯಾಕರ್ ಹೇಳಿಕೊಂಡಿದ್ದಾನೆ. ವಿಮಾ ಕಂಪನಿಯೇ ತನಗೆ ಡೇಟಾವನ್ನು ಮಾರಾಟ ಮಾಡಿವೆ ಎಂದಿದ್ದಾನೆ. ಜುಲೈವರೆಗಿನ 31,216,953 ಗ್ರಾಹಕರ ಡೇಟಾ ಸೇರಿದಂತೆ ಒಟ್ಟು 57,58,425 ಗ್ರಾಹಕರ (ಆಗಸ್ಟ್ 2024 ರ ಆರಂಭದವರೆಗೆ) ಡೇಟಾ ಹೊಂದಿರುವುದಾಗಿ ಹೇಳಿದ್ದಾನೆ. ವೆಬ್ಸೈಟ್ ಪ್ರಕಾರ ಹ್ಯಾಕರ್ ಹೆಸರನ್ನು ಕ್ಷೆನ್ಜೆನ್ (xenZen) ಎಂದು ಹೇಳಲಾಗಿದೆ.
ನಾನು ಎಲ್ಲ ಸ್ಟಾರ್ ಹೆಲ್ತ್ ಇಂಡಿಯಾ ಗ್ರಾಹಕರು ಮತ್ತು ವಿಮಾ ಕ್ಲೈಮ್‌ಗಳ ಸೂಕ್ಷ್ಮ ಡೇಟವನ್ನು ಸೋರಿಕೆ ಮಾಡುತ್ತಿದ್ದೇನೆ. ಇದನ್ನು ಸ್ಟಾರ್ ಹೆಲ್ತ್ ಮತ್ತು ಅಲೈಡ್ ವಿಮಾ ಕಂಪನಿಯೇ ನನಗೆ ನೇರವಾಗಿ ಮಾರಾಟ ಮಾಡಿವೆ. ಬೇಕಿದ್ದರೆ ಈ ಕೆಳಗಿನ ಟೆಲಿಗ್ರಾಂ ಬಾಟ್‌ಗಳಲ್ಲಿ ಡೇಟಾದ ಸತ್ಯಾಸತ್ಯತೆಯನ್ನು ನೀವು ಪರಿಶೀಲಿಸಬಹುದು ಮತ್ತು ಅವರು ಅದನ್ನು ಹೇಗೆ ಮಾರಾಟ ಮಾಡಿದ್ದಾರೆ ಎಂಬುದರ ಕುರಿತು ಓದಬಹುದು ಎಂದು ಹ್ಯಾಕರ್ ಹೇಳಿಕೊಂಡಿದ್ದಾನೆ.
ಅಂದಹಾಗೆ ಸೋರಿಕೆಯಾದ ಡೇಟಾದಲ್ಲಿ ಪೂರ್ಣ ಹೆಸರುಗಳು, ಪ್ಯಾನ್ ಸಂಖ್ಯೆಗಳು, ಮೊಬೈಲ್ ಸಂಖ್ಯೆಗಳು, ಇಮೇಲ್‌ಗಳು, ಜನ್ಮ ದಿನಾಂಕ, ವಸತಿ ವಿಳಾಸಗಳು, ವಿಮೆ ಮಾಡಿದ ದಿನಾಂಕ, ವಿಮೆ ಮಾಡಿದ ಹೆಸರುಗಳು, ಲಿಂಗ, ಮೊದಲೇ ಅಸ್ತಿತ್ವದಲ್ಲಿರುವ ರೋಗಗಳು, ಪಾಲಿಸಿ ಸಂಖ್ಯೆಗಳು, ಆರೋಗ್ಯ ಕಾರ್ಡ್‌ಗಳು, ನಾಮಿನಿ ಹೆಸರುಗಳು, ವಯಸ್ಸು, ಕ್ಲೈಮ್‌ಗಳು, ನಾಮಿನಿ ಸಂಬಂಧ, ಬಿಎಂಐ ಸೇರಿದಂತೆ ಇನ್ನಷ್ಟು ಮಾಹಿತಿ ಇದೆ.
ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ನೀಡಿದ ಹೇಳಿಕೆಯಲ್ಲಿ ಕಂಪನಿಯು ಉದ್ದೇಶಿತ ಹಾಗೂ ದುರುದ್ದೇಶಪೂರಿತ ಸೈಬರ್ ದಾಳಿಗೆ ಬಲಿಯಾಗಿದೆ ಎಂದು ಸ್ಟಾರ್ ಹೆಲ್ತ್ ಇನ್ಶುರೆನ್ಸ್ ಖಚಿತಪಡಿಸಿದೆ. ಈ ಘಟನೆಯಿಂದ ನಮ್ಮ ಕಾರ್ಯಾಚರಣೆಗಳು ಬಾಧಿತವಾಗುವುದಿಲ್ಲ ಎಂದು ನಾವು ಸಂಪೂರ್ಣವಾಗಿ ಸ್ಪಷ್ಟಪಡಿಸುತ್ತೇವೆ. ಎಲ್ಲ ಸೇವೆಗಳು ಯಾವುದೇ ಅಡ್ಡಿಯಿಲ್ಲದೆ ಮುಂದುವರಿಯುತ್ತವೆ. ಸ್ವತಂತ್ರ ಸೈಬರ್ ಭದ್ರತೆ ತಜ್ಞರ ನೇತೃತ್ವದಲ್ಲಿ ಸಂಪೂರ್ಣ ಮತ್ತು ಕಠಿಣವಾದ ವಿಧಿವಿಜ್ಞಾನ ತನಿಖೆ ನಡೆಯುತ್ತಿದೆ ಮತ್ತು ಈ ತನಿಖೆಯ ಪ್ರತಿ ಹಂತದಲ್ಲೂ ನಾವು ಸರ್ಕಾರ ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಈ ಸಂಬಂಧ ಈಗಾಗಲೇ ದೂರು ನೀಡಲಾಗಿದೆ ಎಂದು ಸ್ಟಾರ್ ಹೆಲ್ತ್ ಕಂಪನಿ ಹೇಳಿದೆ.
ನಮ್ಮ ಸಿಐಎಸ್ಒ ತನಿಖೆಯಲ್ಲಿ ಸೂಕ್ತವಾಗಿ ಸಹಕರಿಸುತ್ತಿದೆ. ಹ್ಯಾಕರ್ನಿಂದ ಯಾವುದೇ ತಪ್ಪು ನಡೆದಿರುವುದು ಇಲ್ಲಿಯವರೆಗೆ ಕಂಡುಬಂದಿಲ್ಲ. ಬೆದರಿಕೆ ಹುಟ್ಟಿಸಲು ಆತ ಪ್ರಯತ್ನಿಸುತ್ತಿದ್ದಾನೆ ಎಂದು ನಮಗೆ ತಿಳಿದಿದೆ. ಗ್ರಾಹಕರ ಡೇಟಾದ ಯಾವುದೇ ಅನಧಿಕೃತ ಸ್ವಾಧೀನ ಅಥವಾ ಪ್ರಸಾರವು ಕಾನೂನುಬಾಹಿರವಾಗಿದೆ ಎಂದು ನಾವು ಒತ್ತಿಹೇಳಲು ಬಯಸುತ್ತೇವೆ ಎಂದು ಸ್ಟಾರ್ ಹೆಲ್ತ್ ಕಂಪನಿ ಹೇಳಿದೆ.
ಅಂದಹಾಗೆ ಡೇಟಾ ಸೋರಿಕೆಯು ಮೊದಲು ಹಾಗೂ ವರದಿಯಾದ ನಂತರ ವಿಮಾ ಕಂಪನಿ ಸ್ಟಾರ್ ಹೆಲ್ತ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್ ಮತ್ತು ಹ್ಯಾಕರ್ ವಿರುದ್ಧ ಮೊಕದ್ದಮೆ ಹೂಡಿದೆ.