ಚೆನ್ನೈ: ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿಗೆ ಸೇರಿದ ಚೆನ್ನೈನಲ್ಲಿರುವ ಗೃಹೋಪಯೋಗಿ ಉಪಕರಣಗಳ ತಯಾರಿಕಾ ಘಟಕದಲ್ಲಿ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ.
ಪ್ರತಿಭಟನಾ ನಿರತ ಯೂನಿಯನ್ ಸದಸ್ಯರು ಸೇರಿದಂತೆ 600ಕ್ಕೂ ಹೆಚ್ಚು ಸ್ಯಾಮ್‌ಸಂಗ್ ಕಂಪನಿಯ ಎಲೆಕ್ಟ್ರಾನಿಕ್ಸ್ ವಿಭಾಗದ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 9ರಿಂದ ಯೂನಿಯನ್ ಸದಸ್ಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ನೌಕರರು ಮುಷ್ಕರ ನಡೆಸುತ್ತಿದ್ದಾರೆ.
'ಸ್ಯಾಮ್‌ಸಂಗ್ ನೌಕರರು ಪ್ರತಿ ತಿಂಗಳು ಸರಾಸರಿ ₹25 ಸಾವಿರ ವೇತನ ಪಡೆಯುತ್ತಿದ್ದಾರೆ. ಆದರೆ, ಈ ಮೊತ್ತವನ್ನು ₹36 ಸಾವಿರಕ್ಕೆ ಹೆಚ್ಚಿಸುವಂತೆ ಒತ್ತಾಯಿಸಲಾಗಿದೆ' ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ತಿಳಿಸಿದೆ.
'ಸ್ಯಾಮ್‌ಸಂಗ್ ಕಂಪನಿಯ ನೌಕರರು ಮತ್ತು ಯೂನಿಯನ್ ಸದಸ್ಯರು ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಅವರನ್ನು ಬಂಧಿಸಲಾಗಿದೆ' ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಚಾರ್ಲ್ಸ್ ಸ್ಯಾಮ್ ರಾಜದೊರೈ ಹೇಳಿದ್ದಾರೆ.
ಪ್ರತಿಭಟನಾಕಾರರನ್ನು ನಾಲ್ಕು ಮದುವೆ ಮಂಟಪಗಳಲ್ಲಿ ಬಂಧಿಸಿಡಲಾಗಿದೆ. ಸೆ.16ರಂದು ಪ್ರತಿಭಟನಾ ನಿರತ 104 ನೌಕರರನ್ನು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೌಕರರು ಮುಷ್ಕರ ನಡೆಸುತ್ತಿರುವುದರಿಂದ ರೆಫ್ರಿಜರೇಟರ್ ಹಾಗೂ ವಾಷಿಂಗ್ ಮಷಿನ್‌ಗಳಂತ ಗೃಹೋಪಯೋಗಿ ಉಪಕರಣಗಳ ಉತ್ಪಾದನೆಗೆ ಧಕ್ಕೆಯಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಭಾರತದಲ್ಲಿನ ಉತ್ತಮ ವಹಿವಾಟಿನಿಂದಾಗಿ 2007ರಲ್ಲಿ ಸ್ಯಾಮ್‌ಸಂಗ್, ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ತಯಾರಿಕಾ ಘಟಕ ಆರಂಭಿಸಿತ್ತು. ನಂತರ ಉತ್ತರ ಪ್ರದೇಶದ ನೊಯಿಡಾದಲ್ಲಿ ಸ್ಮಾರ್ಟ್‌ಫೋನ್ ತಯಾರಿಕಾ ಘಟಕವನ್ನು ತೆರೆದಿತ್ತು.