ನವದೆಹಲಿ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಚುನಾವಣೆ ನಡೆದಿದ್ದು, ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ. ರಾಜ್ಯದ 2.03 ಕೋಟಿ ಮತದಾರರ ಪೈಕಿ ಶೇ 61.32 ಮಂದಿ ಮತಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ 1,031 ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ದಾಖಲಾಗಿದೆ. ರಾಜ್ಯದಲ್ಲಿ ಸತತ ಮೂರನೇ ಬಾರಿ ಅಧಿಕಾರಕ್ಕೇರುವ ಆಶಯವನ್ನು ಬಿಜೆಪಿ ಹೊಂದಿದ್ದರೆ, ದಶಕದ ಬಳಿಕ ಮತ್ತೆ ಅಧಿಕಾರ ಪಡೆಯುವ ತವಕದಲ್ಲಿ ಕಾಂಗ್ರೆಸ್ ಇದೆ.
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ, ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್, ಐಎನ್‌ಎಲ್‌ಡಿ ನಾಯಕ ಅಭಯ ಸಿಂಗ್ ಚೌಟಾಲಾ, ಜೆಜೆಪಿಯ ದುಶ್ಯಂತ್ ಚೌಟಾಲಾ ಸೇರಿದಂತೆ ಚುನಾವಣಾ ಅಖಾಡದಲ್ಲಿರುವ ಹಲವು ಪ್ರಮುಖರ ಭವಿಷ್ಯ ಮತಯಂತ್ರದಲ್ಲಿ ಅಡಕವಾಗಿದೆ.
ನೂಹ್‌ನಲ್ಲಿ ಮಾರಾಮಾರಿ: ನೂಹ್ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಪುನ್ಹಾನಾ ಮತ್ತು ಪಕ್ಷೇತರ ಅಭ್ಯರ್ಥಿ ರಹೀಶ್ ಖಾನ್ ಅವರ ಬೆಂಬಲಿಗರ ನಡುವೆ ಮಾರಾಮಾರಿ ಆಗಿದೆ.
ಮಾಜಿ ಶಾಸಕ ಆನಂದ್ ಸಿಂಗ್ ಡಾಂಗಿ ಅವರು ಮತಗಟ್ಟೆಯಲ್ಲಿ ತನ್ನ ಮತ್ತು ಸಹಾಯಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೆಹಮ್ ಕ್ಷೇತ್ರದ ಹರಿಯಾಣ ಜನಸೇವಕ್ ಪಕ್ಷದ ಅಭ್ಯರ್ಥಿ ಬಲರಾಜ್ ಕುಂಡು ಆರೋಪ ಮಾಡಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಚುನಾವಣಾ ಆಯೋಗ ರಾತ್ರಿ 7.20ಕ್ಕೆ ನೀಡಿದ ಮಾಹಿತಿ ಪ್ರಕಾರ ಶೇ 61.32ರಷ್ಟು ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಶೇ 68ರಷ್ಟು ಮತದಾನವಾಗಿತ್ತು. ಇತ್ತೀಚೆಗೆ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಶೇ 64.8ರಷ್ಟು ಮತದಾನ ನಡೆದಿತ್ತು.
ಗುರುಗ್ರಾಮದಲ್ಲಿ ಕಡಿಮೆ ಮತದಾನ: ಅತ್ಯಂತ ಕಡಿಮೆ ಮತದಾನ ಗುರುಗ್ರಾಮ ಮತ್ತು ಫರಿದಾಬಾದ್ ಜಿಲ್ಲೆಗಳಲ್ಲಿ ದಾಖಲಾಗಿವೆ. ಇಲ್ಲಿ ಕ್ರಮವಾಗಿ ಶೇ 49.97 ಮತ್ತು ಶೇ 51.90ರಷ್ಟು ಮತದಾನವಾಗಿದೆ. ಮೇವಾತ್ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ ಶೇ 68.28ರಷ್ಟು ಮತದಾನವಾಗಿದೆ. ನಂತರದ ಸ್ಥಾನದಲ್ಲಿ ಯಮುನಾನಗರ (ಶೇ 67.93) ಮತ್ತು ಫತೇಹಾಬಾದ್ (ಶೇ 67.05) ಜಿಲ್ಲೆಗಳಿವೆ.
ರಾಜ್ಯದ 89 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದು, ಒಂದು ಕ್ಷೇತ್ರವನ್ನು (ಸಿರ್ಸಾ) ಹರಿಯಾಣ ಲೋಖಿತ್ ಪಕ್ಷದ ಮುಖ್ಯಸ್ಥ ಗೋಪಾಲ್ ಕಾಂಡ ಅವರಿಗೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಸಹ 89 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದು, ಭಿವಾನಿ ಕ್ಷೇತ್ರವನ್ನು ಸಿಪಿಎಂಗೆ ಬಿಟ್ಟುಕೊಟ್ಟಿದೆ. ಎಎಪಿ ಮತ್ತು ಐಎನ್‌ಎಲ್‌ಡಿ- ಬಿಎಸ್‌ಪಿ ಹಾಗೂ ಜೆಜೆಪಿ-ಎಎಸ್‌ಪಿ (ಕಾನ್ಶಿರಾಮ್) ಮೈತ್ರಿಗಳು ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಸೈನಿ, ಹೂಡಾ, ಮಾಜಿ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್, ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್, ಕಾಂಗ್ರೆಸ್‌ನ ಹಿರಿಯ ನಾಯಕರಾದ ಕುಮಾರಿ ಸೆಲ್ಜಾ, ರಣದೀಪ್ ಸುರ್ಜೆವಾಲಾ ಅವರು ಬೆಳಿಗ್ಗೆಯೇ ಮತಚಲಾಯಿಸಿದರು.
ಕುದುರೆ ಏರಿ ಬಂದ ಸಂಸದ: ಕುರುಕ್ಷೇತ್ರದ ಸಂಸದ ನವೀನ್ ಜಿಂದಾಲ್ ಅವರು ಮತಗಟ್ಟೆಗೆ ಕುದುರೆ ಏರಿ ಬಂದು ಮತಚಲಾಯಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಅವರು, 'ಕುದುರೆ ಸವಾರಿಯನ್ನು ಮಂಗಳಕರ ಎನ್ನಲಾಗುತ್ತದೆ ಮತ್ತು ಜನರು ಮದುವೆಗೆ ಹೋಗುವಾಗ ಕುದುರೆ ಸವಾರಿ ಮಾಡುತ್ತಾರೆ. ಹೀಗಾಗಿಯೇ ಈ ಶುಭ ಕಾರ್ಯಕ್ಕೆ ನಾನು ಕುದುರೆ ಮೇಲೆ ಬಂದಿದ್ದೇನೆ' ಎಂದರು.
ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರು ಕುಟುಂಬ ಸಮೇತ ಝಜ್ಜರ್‌ನ ಮತಗಟ್ಟೆಯಲ್ಲಿ ಮತಚಲಾಯಿಸಿದರು -ಪಿಟಿಐ ಚಿತ್ರಕುರುಕ್ಷೇತ್ರದ ಬಿಜೆಪಿ ಸಂಸದ ನವೀನ್ ಜಿಂದಾಲ್ ಅವರು ಕುದುರೆ ಏರಿ ಮತಗಟ್ಟೆಗೆ ಬಂದು ಮತಚಲಾವಣೆ ಮಾಡಿದರು -ಪಿಟಿಐ ಚಿತ್ರ