ಅಹಮದಾಬಾದ್: ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಒಂದು ಅಂಕವೂ ಮೌಲ್ಯಯುತವಾಗಿರುತ್ತದೆ. ಆದರೆ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನದ ವೇಳೆ ಶಿಕ್ಷಕರೊಬ್ಬರು ಮಾಡಿದ ಎಡವಟ್ಟಿನಿಂದ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ.
ಉತ್ತರ ಪತ್ರಿಕೆಯ ಮರುಮೌಲ್ಯಮಾಪನದಲ್ಲಿ ಗಣಿತ ಶಿಕ್ಷಕರು 30 ಅಂಕವನ್ನು ಸೇರಿಸುವಲ್ಲಿ ತಪ್ಪು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವರ್ಷ ಬೋರ್ಡ್ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ತಪ್ಪು ಮಾಡಿದ 4,488 ಶಿಕ್ಷಕರಿಗೆ ಶಿಕ್ಷಣ ಇಲಾಖೆ ದಂಡ ವಿಧಿಸಿದೆ. 10 ಮತ್ತು 12ನೇ ಬೋರ್ಡ್ ಪರೀಕ್ಷೆಯಲ್ಲಿ ಶಿಕ್ಷಕರು ಅಂಕ ಸೇರಿಸುವಲ್ಲಿ ದೊಡ್ಡ ತಪ್ಪು ಮಾಡಿದ್ದು, ಶಿಕ್ಷಣ ಇಲಾಖೆ ಶಿಕ್ಷಕರಿಂದ 64 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ ವರದಿಯಾಗಿದೆ.
ಶಾಲೆಗಳಲ್ಲಿ ಗಣಿತ ಕಲಿಸುತ್ತಿರುವ ಶಿಕ್ಷಕರಿಂದಲೇ ಈ ತಪ್ಪು ನಡೆದಿರುವುದು ಆತಂಕಕಾರಿ ಸಂಗತಿ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಮುಂದಿನ ಅಧ್ಯಯನಕ್ಕೆ ಆಧಾರವಾಗಿರುವ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಆಗಿರುವ ತಪ್ಪುಗಳ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರಿಗೆ ದಂಡ ವಿಧಿಸಿದ ನಂತರ ಗಣಿತ ಮತ್ತು ವಿಜ್ಞಾನ ಪರೀಕ್ಷೆಗಳ ಅಂಕಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. 10ನೇ ತರಗತಿಯಲ್ಲಿ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದ 1,654 ಶಿಕ್ಷಕರು ತಪ್ಪು ಮಾಡಿ 20 ಲಕ್ಷ ರೂಪಾಯಿ ಹಾಗೂ 12ನೇ ತರಗತಿ ಸಾಮಾನ್ಯ ವಿಷಯಗಳಲ್ಲಿ 1,404 ಶಿಕ್ಷಕರು ತಪ್ಪು ಮಾಡಿದ್ದು, ಅವರಿಂದ 24.31 ಲಕ್ಷ ರೂಪಾಯಿ, ವಿಜ್ಞಾನ ವಿಷಯಗಳಲ್ಲಿ 1,430 ಶಿಕ್ಷಕರು ತಪ್ಪು ಮಾಡಿದ್ದು, ಅವರಿಂದ 19.66 ಲಕ್ಷ ರೂಪಾಯಿಗಳ ದಂಡ ವಸೂಲಿ ಮಾಡಲಾಗಿದೆ. ಶಿಕ್ಷಕರು ತಪ್ಪು ಮಾಡಿದ ಪ್ರತಿ ಅಂಕಕ್ಕೆ 100 ರೂಪಾಯಿ ದಂಡ ವಿಧಿಸಲಾಗಿದೆ.
ಈ ವರ್ಷ ಗುಜರಾತ್‌ನಲ್ಲಿ 40,000 ರಿಂದ 45,000 ಶಿಕ್ಷಕರು ಉತ್ತರ ಪತ್ರಿಕೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಶಿಕ್ಷಕರ ಎಡವಟ್ಟಿನಿಂದ ಆಗಿರುವ ತಪ್ಪು ವಿದ್ಯಾರ್ಥಿಯ ಭವಿಷ್ಯಕ್ಕೆ ಮುಳ್ಳಗುತ್ತದೆ.ಉತ್ತರ ಪತ್ರಿಕೆಗಳ ಪರಿಶೀಲನೆಯಲ್ಲಿ ಜಾಗರೂಕರಾಗಿರಲು ಶಿಕ್ಷಕರನ್ನು ಪ್ರೇರೇಪಿಸುವುದು ಭಾರಿ ದಂಡ ವಿಧಿಸುವ ಉದ್ದೇಶವಾಗಿದೆ ಎಂದು ಶಿಕ್ಷಣ ಇಲಾಖೆ ಹೇಳುತ್ತದೆ.