ತಿರುವನಂತಪುರಂ: ಕರ್ನಾಟಕದ ಶಿರೂರಿನಲ್ಲಿ ಭೂಕುಸಿತದಿಂದ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಕುಟುಂಬಕ್ಕೆ 7 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ಸಂಪುಟ ಸಭೆ ನಿರ್ಧರಿಸಿದೆ
ಜುಲೈ 16 ರಂದು ರಾಷ್ಟ್ರೀಯ ಹೆದ್ದಾರಿ 66 ರ ಶಿರೂರಿನಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಅರ್ಜುನ್ ಲಾರಿ ಸಹಿತ ನಾಪತ್ತೆಯಾಗಿದ್ದರು. ಟೀ ಅಂಗಡಿ ಮುಂದೆ ನಿಲ್ಲಿಸಿದ್ದ ವಾಹನಗಳು ನೆಲದಡಿಯಲ್ಲಿ ಹೂತು ಹೋಗಿದ್ದವು.
ಈ ದುರ್ಘಟನೆಯಲ್ಲಿ ಟೀ ಅಂಗಡಿಯ ಮಾಲೀಕರು ಹಾಗೂ ಅವರ ಕುಟುಂಬದವರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದರು. ಕಾರವಾರ ಮಾರ್ಗದ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ಈ ದುರಂತ ಸಂಭವಿಸಿದ್ದು, ರಸ್ತೆಯ ಒಂದು ಬದಿಯ ಗುಡ್ಡ ಕುಸಿದಿದ್ದು, ಮತ್ತೊಂದು ಕಡೆ ಗಂಗಾವಳಿ ನದಿ ಹರಿಯುತ್ತದೆ. ನಿಲ್ಲಿಸಲಾಗಿದ್ದ ಇಂಧನ ಟ್ಯಾಂಕರ್ ಗಂಗಾವಳಿ ನದಿಗೆ ಘಟನೆಯ ವೇಳೆ ನುಗ್ಗಿದೆ.
ಅಡೆತಡೆಗಳ ನಡುವೆ ನಿರಂತರವಾಗಿ ನಡೆಸಿದ ಕಾರ್ಯಾಚರಣೆಯ ಫಲವಾಗಿ 72 ದಿನಗಳ ನಂತರ ಮೃತದೇಹ ಪತ್ತೆಯಾಗಿತ್ತು. ಬಳಿಕ ಕೇರಳ ಸರ್ಕಾರ ಹೇಳಿರುವಂತೆ ಅರ್ಜುನ್ ಪತ್ನಿಗೆ ಸಹಕಾರಿ ಬ್ಯಾಂಕ್ ನಲ್ಲಿ ಕೆಲಸ ನೀಡಿತ್ತು. ಅರ್ಜುನ್ ಕುಟುಂಬಕ್ಕೆ ಕರ್ನಾಟಕ ಸರ್ಕಾರ 5 ಲಕ್ಷ ರೂ.ಈಗಾಗಲೇ ನೀಡಿದೆ.