ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ 70 ವಾರಂಟ್ ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತಾ ಕ್ರಮದ ಅಂಗವಾಗಿ ತಪಾಸಣೆ ನಡೆಸಲಾಯಿತು.
ಉಪವಿಭಾಗದ ಡಿವೈಎಸ್ಪಿಗಳು ಮತ್ತು ವಿಶೇಷ ಶಾಖೆಯ ಡಿವೈಎಸ್ಪಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಯಿತು. ಜಿಲ್ಲೆಯ ವಿವಿಧೆಡೆ ಏಕಕಾಲಕ್ಕೆ ನಡೆದ ಈ ತಪಾಸಣೆಯಲ್ಲಿ ವಾರೆಂಟ್, ಶಂಕಿತ ಆರೋಪಿಗಳ ಹುಡುಕಾಟದಲ್ಲಿ ಪೋಲೀಸ್ ತಂಡ ಮನೆ ಹಾಗೂ ಇತರ ಅಡಗುತಾಣಗಳಲ್ಲಿ ದಾಳಿ ನಡೆಸಿತು.
ಅಪರಾಧವನ್ನು ಕಡಿಮೆ ಮಾಡುವಲ್ಲಿ ದೊಡ್ಡ ಸಾಧನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡಲು ಮತ್ತು ಕಾನೂನು ಪಾಲನೆಗಾಗಿ ಇಂತಹ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಪೋಲೀಸ್ ಮೂಲಗಳು ತಿಳಿಸಿವೆ.