ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 70 ವರ್ಷ ದಾಟಿದವರಿಗೆ ವಿಶೇಷ ಆರೋಗ್ಯ ವಿಮೆ ಘೋಷಣೆ ಮಾಡಿದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರಿಗೆ ಅವರ ಆದಾಯದ ಸ್ಥಿತಿಯನ್ನು ಲೆಕ್ಕಿಸದೆ ಆರೋಗ್ಯ ರಕ್ಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 29 ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
"70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ವಿಸ್ತೃತ ಯೋಜನೆಯನ್ನು ಪ್ರಧಾನಿ ಪ್ರಾರಂಭಿಸುವ ಸಾಧ್ಯತೆಯಿದೆ. ಇದು ಸುಮಾರು 4.5 ಕೋಟಿ ಕುಟುಂಬಗಳ ಅಂದಾಜು ಆರು ಕೋಟಿ ನಾಗರಿಕರಿಗೆ ಪ್ರಯೋಜನವನ್ನು ನೀಡುತ್ತದೆ" ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ ಪ್ರತಿರಕ್ಷಣೆ ಲಸಿಕೆಗಳ ನೋಂದಣಿಗೆ ಈ ಹಿಂದೆ ಅಭಿವೃದ್ಧಿಪಡಿಸಲಾಗಿದ್ದ U-WIN ಪೋರ್ಟಲ್ ನಲ್ಲಿ ವಿದ್ಯುನ್ಮಾನ ನೋಂದಣಿಗೆ ಬಳಸಲಾಗುತ್ತದೆ. ಪ್ರಸ್ತುತ ಇದು ಪ್ರಾಯೋಗಿಕ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ.
ಅಕ್ಟೋಬರ್ 29ರಂದು ಈ ಪೋರ್ಟಲ್ ಅನ್ನು ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಇವೆರಡನ್ನು ಹೊರತುಪಡಿಸಿ, ಇನ್ನೂ ಕೆಲವು ಯೋಜನೆಗಳನ್ನು ಮಂಗಳವಾರ ಪ್ರಾರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
COVID-19 ಲಸಿಕೆ ನಿರ್ವಹಣಾ ವ್ಯವಸ್ಥೆಯ Co-WIN ನ ಪ್ರತಿರೂಪವಾಗಿರುವ U-Win ಪ್ಲಾಟ್‌ಫಾರ್ಮ್ ಅನ್ನು ಗರ್ಭಿಣಿಯರು ಮತ್ತು ಜನನದಿಂದ 17 ವರ್ಷದೊಳಗಿನ ಮಕ್ಕಳ ವ್ಯಾಕ್ಸಿನೇಷನ್‌ನ ಶಾಶ್ವತ ಡಿಜಿಟಲ್ ದಾಖಲೆಯನ್ನು ಇರಿಸಿಕೊಳ್ಳಲು ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮವಾಗಿ ಅಭಿವೃದ್ಧಿಪಡಿಸಲಾಗಿದೆ.