ಜ್ಯೂರಿಚ್ : ಇಸ್ರೇಲ್-ಹಮಾಸ್ ಯುದ್ಧ ಉಲ್ಬಣಗೊಂಡ ನಂತರ ಗಾಝಾದಲ್ಲಿ ನಿರುದ್ಯೋಗವು ಸುಮಾರು 80%ಕ್ಕೆ ಏರಿದ್ದು ಯುದ್ಧದಿಂದ ಜರ್ಝರಿತಗೊಂಡಿರುವ ಪ್ರದೇಶದ ಆರ್ಥಿಕತೆ ಬಹುತೇಕ ಕುಸಿತದ ಅಂಚಿನಲ್ಲಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ `ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ' (ಐಎಲ್‌ಒ) ಗುರುವಾರ ಹೇಳಿದೆ.
ಒಂದು ವರ್ಷದ ಹಿಂದೆ ಇಸ್ರೇಲ್ನೊಂದಿಗೆ ಸಂಘರ್ಷವು ಪ್ರಾರಂಭವಾದಂದಿನಿಂದ ಆರ್ಥಿಕ ಉತ್ಪಾದನೆಯು 85%ದಷ್ಟು ಕುಗ್ಗಿದ್ದು ಸುಮಾರು 2.3 ದಶಲಕ್ಷ ಜನಸಂಖ್ಯೆಯನ್ನು ಬಡತನಕ್ಕೆ ತಳ್ಳಿದೆ. ಸಂಘರ್ಷವು ಆಕ್ರಮಿತ ಫೆಲೆಸ್ತೀನ್ ಪ್ರದೇಶದಾದ್ಯಂತ ಕಾರ್ಮಿಕ ಮಾರುಕಟ್ಟೆ ಮತ್ತು ಆರ್ಥಿಕತೆಯ ಮೇಲೆ ಅಸಾಮಾನ್ಯ ಮತ್ತು ವ್ಯಾಪಕವಾದ ವಿನಾಶವನ್ನು ಉಂಟು ಮಾಡಿದೆ ಎಂದು ಐಎಲ್‌ಒ ಹೇಳಿದೆ.
2023ರ ಅಕ್ಟೋಬರ್ ಮತ್ತು 2024ರ ಸೆಪ್ಟಂಬರ್ ನಡುವೆ ಪಶ್ಚಿಮದಂಡೆಯಲ್ಲಿ ನಿರುದ್ಯೋಗದ ಪ್ರಮಾಣ ಸರಾಸರಿ 34.9% ರಷ್ಟಿತ್ತು. ಇದೇ ವೇಳೆ ಹಿಂದಿನ 12 ತಿಂಗಳುಗಳಿಗೆ ಹೋಲಿಸಿದರೆ ಆರ್ಥಿಕತೆಯು 21.7%ರಷ್ಟು ಕುಗ್ಗಿದೆ. ಸಂಘರ್ಷಕ್ಕೂ ಮುನ್ನ ಗಾಝಾದಲ್ಲಿ ನಿರುದ್ಯೋಗದ ಪ್ರಮಾಣ 45.3% ಮತ್ತು ಪಶ್ಚಿಮದಂಡೆಯಲ್ಲಿ 14% ಆಗಿತ್ತು. ಗಾಝಾ ನಿವಾಸಿಗಳು ತಮ್ಮ ಉದ್ಯೋಗಗಳನ್ನು ಸಂಪೂರ್ಣವಾಗಿ ಕಳೆದುಕೊಂಡರು ಅಥವಾ ಅಸಾಂಪ್ರದಾಯಕ ಮತ್ತು ಅನಿಯಮಿತ ಕೆಲಸಕ್ಕೆ (ಪ್ರಾಥಮಿಕವಾಗಿ ಅಗತ್ಯದ ಸರಕುಗಳು ಮತ್ತು ಸೇವೆಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿದ) ಸೇರಿದರು ಎಂದು ವರದಿ ಹೇಳಿದೆ.
ಗಾಝಾ ಪಟ್ಟಿಯಲ್ಲಿನ ಯುದ್ಧದ ಪ್ರಭಾವವು ಜೀವಹಾನಿ, ಹತಾಶ ಮಾನವೀಯ ಪರಿಸ್ಥಿತಿಗಳು ಮತ್ತು ಭೌತಿಕ ವಿನಾಶವನ್ನು ಮೀರಿದ ನಷ್ಟಕ್ಕೆ ಕಾರಣವಾಗಿದೆ. ಇದು ಮೂಲಭೂತವಾಗಿ ಗಾಝಾದ ಸಾಮಾಜಿಕ-ಆರ್ಥಿಕ ಭೂದೃಶ್ಯವನ್ನು ಬದಲಾಯಿಸಿದೆ. ಜತೆಗೆ, ಪಶ್ಚಿಮದಂಡೆಯ ಆರ್ಥಿಕತೆ ಮತ್ತು ಕಾರ್ಮಿಕ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಮುಂದಿನ ತಲೆಮಾರುಗಳ ಮೇಲೆಯೂ ಪರಿಣಾಮ ಬೀರಲಿದೆ ಎಂದು ಅರಬ್ ದೇಶಗಳಿಗೆ ಐಎಲ್‌ಒ ಪ್ರಾದೇಶಿಕ ನಿರ್ದೇಶಕಿ ರೂಬಾ ಜರಾದತ್ ಹೇಳಿದ್ದಾರೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪು ನಡೆಸಿದ ದಾಳಿಗೆ ಪ್ರತೀಕಾರವಾಗಿ ಗಾಝಾದ ಮೇಲೆ ಇಸ್ರೇಲ್ನ ದಾಳಿ ಕಳೆದ ಒಂದು ವರ್ಷದಿಂದ ಮುಂದುವರಿದಿದ್ದು 42,000ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಗಾಝಾದ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಗಾಝಾದ ಸುಮಾರು 1,63,000 ಕಟ್ಟಡಗಳು ಧ್ವಂಸಗೊಂಡಿವೆ ಅಥವಾ ತೀವ್ರ ಹಾನಿಗೊಂಡಿಚೆ ಎಂದು ವಿಶ್ವಸಂಸ್ಥೆ ಅಂಕಿಅಂಶ ತಿಳಿಸಿದೆ. ಇರಾನ್ ಬೆಂಬಲಿತ ಹಮಾಸ್ ಇಸ್ರೇಲ್ನ ನಾಗರಿಕರಿಗೆ ತೊಂದರೆ ನೀಡುವುದನ್ನು ತಡೆಯಲು ಪಶ್ಚಿಮದಂಡೆ ಮತ್ತು ಗಾಝಾದಲ್ಲಿ ತಾನು ನಡೆಸುತ್ತಿರುವ ಕಾರ್ಯಾಚರಣೆ ಅನಿವಾರ್ಯವಾಗಿದೆ ಎಂದು ಇಸ್ರೇಲ್ ಪ್ರತಿಪಾದಿಸುತ್ತಿದೆ.