ನವದೆಹಲಿ: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಮುಂದುವರಿದಿದ್ದು ಇಂದು (ಗುರುವಾರ) 80 ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾ, ವಿಸ್ತಾರಾ, ಇಂಡಿಗೋದ 20 ವಿಮಾನ, ಆಕಾಸಾದ 13 ವಿಮಾನಗಳಿಗೆ ಹಾಗೂ ಸ್ಪೈಸ್ ಜೆಟ್‌ನ 5 ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ.
'ಇಂದು ಹೈದರಬಾದ್- ಗೋವಾ, ಕೋಲ್ಕತ್ತಾ-ಹೈದರಾಬಾದ್, ಕೋಲ್ಕತ್ತಾ - ಬೆಂಗಳೂರು, ಬೆಂಗಳೂರು - ಕೋಲ್ಕತ್ತಾ, ದೆಹಲಿ- ಇಸ್ತಾಂಬುಲ್, ಮುಂಬೈ - ಇಸ್ತಾಂಬುಲ್, ಜೆಡ್ಡಾ- ಮುಂಬೈ, ಬೆಂಗಳೂರು- ಝರ್ಸುಗುಡ ಮಾರ್ಗದ ವಿಮಾನ ಸೇರಿ 20 ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ" ಎಂದು ಇಂಡಿಗೋದ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಇಂದು 13 ವಿಮಾನಗಳಿಗೆ ಬೆದರಿಕೆ ಬಂದಿತ್ತು. ಎಲ್ಲಾ ರೀತಿಯ ತಪಾಸಣೆ ಬಳಿಕ ಸಂಚಾರಕ್ಕೆ ಅನುಮತಿಸಲಾಗಿದೆ" ಎಂದು ಆಕಾಸಾ ಏರ್‌ಲೈನ್ಸ್‌ನ ವಕ್ತಾರ ವಿವರಿಸಿದ್ದಾರೆ.
'ಸಾಮಾಜಿಕ ಜಾಲತಾಣದ ಮೂಲಕ ಬಾಂಬ್ ಬೆದರಿಕೆ ಬಂದಿದೆ" ಎಂದು ವಿಸ್ತಾರಾ ಏರ್‌ಲೈನ್ಸ್ ವಕ್ತಾರ ತಿಳಿಸಿದ್ದಾರೆ.