ವಯನಾಡು: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ರಾಜಿನಾಮೆಯಿಂದ ತೆರವಾಗಿದ್ದು ವಯನಾಡು ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಕಾಂಗ್ರೆಸ್ ನಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಪ್ರಿಯಾಂಕಾ ವಾದ್ರಾ ಕುಟುಂಬ ಸಮೇತ ವಯನಾಡಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಉಪಸ್ಥಿತರಿದ್ದರು. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು ಆ ವಿಡಿಯೋದಲ್ಲಿ ಪ್ರಿಯಾಂಕಾ ವಾದ್ರಾ ನಾಮಪತ್ರ ಸಲ್ಲಿಕೆ ವೇಳೆ ಬಾಗಿಲ ಹೊರಗೆ ನಿಂತು ಖರ್ಗೆ ಇಣುಕಿ ನೋಡುತ್ತಿರುವುದನ್ನು ಕಾಣಬಹುದು.
ಬಿಜೆಪಿ ಹಿರಿಯ ಮುಖಂಡ ರಾಜೀವ್ ಚಂದ್ರಶೇಖರ್ ಅವರು, ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ನೀವು ಎಲ್ಲಿದ್ದಿರಿ ಮಲ್ಲಿಕಾರ್ಜುನ ಖರ್ಗೆ ಸಾಹೇಬರೇ? ಮೊದಲ ಕುಟುಂಬದ ವಯನಾಡ್‌ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ವಾದ್ರಾ ಅವರು ನಾಮಪತ್ರ ಸಲ್ಲಿಸುತ್ತಿದ್ದಾಗ ನಿಮ್ಮನ್ನು ಹೊರಗೆ ಇರಿಸಲಾಗಿದೆ. ಕಾರಣ ನೀವು ಅವರ ಕುಟುಂಬವಲ್ಲ. ಕುಟುಂಬಕ್ಕೆ ಮೊದಲ ಆದ್ಯತೆ ಎಂದು ಬರೆದಿದ್ದಾರೆ.
ಅಷ್ಟೇ ಅಲ್ಲದೆ, ಸೋನಿಯಾ ಕುಟುಂಬದ ಅಹಂಕಾರ ಮತ್ತು ಅರ್ಹತೆಯ ಬಲಿಪೀಠದಲ್ಲಿ ಆತ್ಮಗೌರವ ಮತ್ತು ಘನತೆಯನ್ನು ತ್ಯಾಗ ಮಾಡಲಾಗಿದೆ. ಅವರು ಹಿರಿಯ ದಲಿತ ನಾಯಕ ಮತ್ತು ಪಕ್ಷದ ಅಧ್ಯಕ್ಷರನ್ನು ಈ ರೀತಿ ನಡೆಸಿಕೊಂಡರೆ, ಅವರು ವಯನಾಡಿನ ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಊಹಿಸಿ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಲ್ಲದೆ ವ್ಯತಿರಿಕ್ತ ಕಮೆಂಟ್ ಗಳು ವ್ಯಕ್ತವಾಗುತ್ತಿದೆ. ಕೆಲವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೆಂಥ ದು:ಸ್ಥಿತಿ ಎಂದು ಬರೆದರೆ, ಕೆಲವರು ಇದು ನಕಲಿ ವಿಡಿಯೋ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಈ ವಿಡಿಯೋ ಅಸಲಿಯತ್ತೇನು ಎಂಬುದು ಇನ್ನು ಪತ್ತೆಯಾಗಿಲ್ಲ.