ಕಳೆದ ತಿಂಗಳು ಮಲಯಾಳಂ ಚಿತ್ರರಂಗದಲ್ಲಿ ಸ್ಫೋಟಗೊಂಡ ಕಾಸ್ಟಿಂಗ್ ಕೌಚ್ ಎಂಬ ಜ್ವಾಲೆ, ಇಡೀ ಸಿನಿ ಇಂಡಸ್ಟ್ರಿಯನ್ನೇ ತಲೆಕೆಳಗಾಗಿ ಮಾಡಿತು. ಲೈಂಗಿಕ ದೌರ್ಜನ್ಯ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಬೆಳವಣಿಗೆಗಳು ಮಾಲಿವುಡ್ನ ಘನತೆ, ಗೌರವಕ್ಕೆ ಕಪ್ಪುಚುಕ್ಕೆ ತಂದ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಮೋಹನ್ ಲಾಲ್ ರಾಜೀನಾಮೆ ಘೋಷಿಸಿದರು.
ನಟನ ಜತೆಗೆ ಸಮಿತಿಯ ಸದಸ್ಯರೆಲ್ಲರೂ ಒಟ್ಟಾಗಿ ರಾಜೀನಾಮೆ ಸಲ್ಲಿಸಿದ್ದು, ಕಮಿಟಿಯನ್ನು ವಿಸರ್ಜಿಸಿದರು. ಈ ಎಲ್ಲಾ ಪರಿಸ್ಥಿತಿಯಿಂದ ಇದೀಗ ಮಲಯಾಳಂ ಚಿತ್ರರಂಗ ತಂದೆ-ತಾಯಿ ಇಲ್ಲದ ಮಗುವಿನಂತೆ ಅನಾಥವಾಗಿದೆ.
ತಮ್ಮ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ ಘೋಷಿಸುತ್ತಿದ್ದಂತೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದರು. ಈ ಮೂಲಕ ಕಮಿಟಿಯ ವಿಸರ್ಜನೆಗೆ ಕಾರಣರಾದರು. ಹೇಮಾ ಕಮಿಟಿ ವರದಿ ಬಳಿಕ ಸಾಲು ಸಾಲು ನಟಿಮಣಿಯರು ತಮಗಾದ ಲೈಂಗಿಕ ಕಿರುಕುಳದ ಅನುಭವವನ್ನು ಬಹಿರಂಗವಾಗಿ ಹಂಚಿಕೊಂಡರು. ಯಾರಿಂದ, ಯಾವಾಗ ತಮಗೆ ಇಂತಹ ಕೆಟ್ಟ ಪರಿಸ್ಥಿತಿ ಎದುರಾಗಿತ್ತು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಅಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೋಹನ್ ಲಾಲ್ ಇಂದಿಗೂ ಹಿಂತಿರುಗಿಲ್ಲ. ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ನಟಿ ಸೀನಾಥ್, ಅಮ್ಮ ಇಲ್ಲದಿದ್ದರೆ ನಷ್ಟ ನಿಮಗಲ್ಲ ನನಗೆ ಎಂದು ಹೇಳಿದ್ದಾರೆ.
ಈ ಕುರಿತು ಹಿರಿಯ ನಟರಾದ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ಗೆ ಪತ್ರ ಬರೆದಿರುವ ಸೀನಾಥ್, 'ನಿಮ್ಮಿಬ್ಬರ ನೇತೃತ್ವದಲ್ಲಿ ನಡೆಯುತ್ತಿದ್ದ 'ಅಮ್ಮ' ಎಂಬ ಸಂಘಟನೆಯನ್ನು ನೀವಿಲ್ಲದೆ ಯೋಚಿಸಲು ಸಾಧ್ಯವೇ ಇಲ್ಲ. ಮೋಹನ್ ಲಾಲ್ ಅವರೇ ದಯವಿಟ್ಟು ನೀವು ನಿಮ್ಮ ಅಧ್ಯಕ್ಷ ಸ್ಥಾನಕ್ಕೆ ಮರಳಬೇಕು. ಅಮ್ಮ ಸಂಸ್ಥೆ ಕಣ್ಮರೆಯಾದಲ್ಲಿ ನಷ್ಟವಾಗುವುದು ಮಮ್ಮುಟ್ಟಿ ಮತ್ತು ಮೋಹನ್‌ಲಾಲ್‌ಗೆ ಅಲ್ಲ, ಬದುಕಲು ಹೆಣಗಾಡುತ್ತಿರುವ ಕೆಲವು ಕಲಾವಿದರಿಗೆ ಮತ್ತು ಸಂಸ್ಥೆಯ ಪ್ರತಿಯೊಬ್ಬ ವ್ಯಕ್ತಿಗೆ ಹಾಗೂ ನನಗೆ' ಎಂದು ಬರೆದಿದ್ದಾರೆ.