ಪಟ್ನಾ: ಜನ ಸುರಾಜ್ ಪಕ್ಷದ (ಜೆಎಸ್‌ಪಿ) ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರು ಸೇನಾ ಪಡೆಯ ಮಾಜಿ ಉಪ ಮುಖ್ಯಸ್ಥ, ಲೆಫ್ಟಿನಂಟ್ ಜನರಲ್ ಕೃಷ್ಣ ಸಿಂಗ್ ಅವರನ್ನು 'ತರಾರಿ' ವಿಧಾನಸಭೆ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಬುಧವಾರ ಘೋಷಿಸಿದ್ದಾರೆ.
ಪಟ್ನಾ: ಜನ ಸುರಾಜ್ ಪಕ್ಷದ (ಜೆಎಸ್‌ಪಿ) ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರು ಸೇನಾ ಪಡೆಯ ಮಾಜಿ ಉಪ ಮುಖ್ಯಸ್ಥ, ಲೆಫ್ಟಿನಂಟ್ ಜನರಲ್ ಕೃಷ್ಣ ಸಿಂಗ್ ಅವರನ್ನು 'ತರಾರಿ' ವಿಧಾನಸಭೆ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಬುಧವಾರ ಘೋಷಿಸಿದ್ದಾರೆ.
ಚುನಾವಣಾ ಕಾರ್ಯತಂತ್ರ ನಿಪುಣರೂ ಆಗಿರುವ ಕಿಶೋರ್ ಹಾಗೂ ಜೆಎಸ್‌ಪಿ ಕಾರ್ಯಾಧ್ಯಕ್ಷ, ನಿವೃತ ರಾಜತಾಂತ್ರಿಕ ಅಧಿಕಾರಿ ಮನೋಜ್ ಭಾರ್ತಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿಯ ಹೆಸರು ಪ್ರಕಟಿಸಲಾಗಿದೆ.
ಮುಂದಿನ ತಿಂಗಳು ಉಪಚುನಾವಣೆ ನಡೆಯಲಿರುವ ಇತರ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದ ಕಿಶೋರ್, ಮರಳು ಅಕ್ರಮ ಗಣಿಗಾರಿಕೆ ಹಾಗೂ ಇತರ ಮಾಫಿಯಾಗಳಿಗೆ ಹೆಸರಾಗಿರುವ ಕ್ಷೇತ್ರದಲ್ಲಿ ಸಿಂಗ್ ಕಣಕ್ಕಿಳಿಯುತ್ತಿರುವುದು ತರಾರಿ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
'ಇಂಡಿಯಾ' ಮೈತ್ರಿಕೂಟದ ಭಾಗವಾಗಿರುವ ಸಿಪಿಐ (ಎಂಎಲ್) ನಾಯಕ ಸುದಾಮ ಪ್ರಸಾದ್ 'ತರಾರಿ' ಕ್ಷೇತ್ರದ ಶಾಸಕರಾಗಿದ್ದರು. ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಅರಾಹ್‌ನಿಂದ ಗೆದ್ದು ಸಂಸತ್ ಪ್ರವೇಶಿಸಿರುವುದರಿಂದ ಉಪಚುನಾವಣೆ ನಡೆಯುತ್ತಿದೆ.
ತರಾರಿ (ಎಸ್‌ಸಿ) ಜೊತೆಗೆ ರಾಮಗಢ, ಇಮಾಮ್‌ಗಂಜ್ (ಎಸ್‌ಸಿ) ಹಾಗೂ ಬೆಲಗಂಜ್ ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ.