ಜಮ್ಶೆಡ್‌ಪುರ್: ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 1.5 ಲಕ್ಷ ಉದ್ಯೋಗ ಸೃಜಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭರವಸೆ ನೀಡಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ರಾಜ್ಯದಲ್ಲಿ ಗುರುವಾರ ಪ್ರಚಾರ ನಡೆಸಿದ ಅವರು, 'ರಾಜ್ಯದಲ್ಲಿ 1.5 ಲಕ್ಷ ಉದ್ಯೋಗ ಸೃಜಿಸಲಾಗುವುದು.
'ಹೇಮಂತ್ ಸೊರೇನ್ ನೇತೃತ್ವದ ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ. ಜತೆಗೆ ಖನಿಜ ಸಂಪತ್ತಿನ ದುರ್ಬಳಕೆ ಮಾಡಿಕೊಂಡಿದೆ' ಎಂದು ಆರೋಪಿಸಿದರು.
ಜಾರ್ಖಂಡ್ ನೇಮಕಾತಿ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲಾಗುವುದು. ನಾನು ಬಹಳಷ್ಟು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಆದರೆ ಜಾರ್ಖಂಡ್‌ನಲ್ಲಿನ ಪರಿಸ್ಥಿತಿ ಹಾಗೂ ನಿರಂತರ ಪ್ರಶ್ನೆ ಪತ್ರಿಕೆ ಸೋರಿಕೆ ಪಿಡುಗು ಎಲ್ಲಿಯೂ ಇಲ್ಲ' ಎಂದಿದ್ದಾರೆ.
'ರಾಜ್ಯದಲ್ಲಿ ಸದ್ಯ ಆಡಳಿತದಲ್ಲಿರುವ ಸರ್ಕಾರವು ಸಾಮಾನ್ಯ ಜನರ ಪರವಾಗಿರುವ ಬದಲು ಬಾಂಗ್ಲಾ ನುಸುಳುಕೋರರು, ಮಾಫಿಯಾ ಹಾಗೂ ದಲ್ಲಾಳಿಗಳ ಪರವಾಗಿದೆ. ಹೇಮಂತ್ ಸೊರೇನ್ ಸರ್ಕಾರವು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡುತ್ತಿದೆಯೇ ಹೊರತು, ಸಾರ್ವಜನಿಕರಿಗೆ ಅಲ್ಲ. ಒಂದೊಮ್ಮೆ ಬಿಜೆಪಿಗೆ ಅಧಿಕಾರ ನೀಡಿದರೆ, ಹಿಂದೂ, ಆದಿವಾಸಿ ಮತ್ತು ಬಡವರ ಪರ ಸರ್ಕಾರ ರಚಿಸಲಾಗುವುದು' ಎಂದು ಭರವಸೆ ನೀಡಿದರು.