HEALTH TIPS

ಮಹಾರಾಷ್ಟ್ರ : BJP ಪರ ಜನಾಭಿಪ್ರಾಯ ರೂಪಿಸುವ ಯತ್ನ: ಪ್ರಚಾರ ಕಾರ್ಯ ಆರಂಭಿಸಿದ RSS

       ವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಂತೆಯೇ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವ್ಯಾಪಕ ಪ್ರಚಾರ ಕಾರ್ಯಕ್ರಮ ಆರಂಭಿಸಿದೆ.

         ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಎನಿಸಿರುವ ಆರ್‌ಎಸ್‌ಎಸ್ ತನ್ನ ಎಲ್ಲಾ ಅಂಗ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಪ್ರಚಾರ ಕಾರ್ಯ ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

'ರಾಜ್ಯದಾದ್ಯಂತ ತಂಡಗಳನ್ನು ರಚಿಸಲಾಗಿದ್ದು, ಆ ತಂಡಗಳು ತಮ್ಮ ಸಂದೇಶವನ್ನು ಆಯಾ ಪ್ರದೇಶಗಳ ಜನರಿಗೆ ತಲುಪಿಸುವ ಕೆಲಸವನ್ನು ಆರಂಭಿಸಿವೆ' ಎಂದೂ ಹೇಳಿವೆ.

          ಪ್ರತಿ ತಂಡವು 5 ರಿಂದ 10 ಜನರ ಸಣ್ಣ ಗುಂಪುಗಳನ್ನು ಸೇರಿಸಿಕೊಂಡು ಸಭೆಗಳನ್ನು ನಡೆಸುತ್ತಿವೆ ಮತ್ತು ಆಯಾ ಪ್ರದೇಶಗಳಲ್ಲಿನ 'ಮೊಹಲ್ಲಾ'ಗಳಲ್ಲಿ ತಮ್ಮ ಸ್ಥಳೀಯ ಕಾರ್ಯಕರ್ತರ ಮೂಲಕ ಪ್ರತಿಯೊಂದು ಕುಟುಂಬವನ್ನು ತಲುಪುವ ಕೆಲಸ ಮಾಡುತ್ತಿವೆ ಎಂದು ವಿವರಿಸಿವೆ.

         'ಇಂತಹ ಸಭೆಗಳಲ್ಲಿ, ಅವರು ಬಿಜೆಪಿ ಪರ ನೇರವಾಗಿ ಪ್ರಚಾರ ಮಾಡುತ್ತಿಲ್ಲ. ಆದರೆ, ರಾಷ್ಟ್ರೀಯ ಹಿತಾಸಕ್ತಿ, ಹಿಂದುತ್ವ, ಒಳ್ಳೆಯ ಆಡಳಿತ, ಅಭಿವೃದ್ಧಿ, ಸಾರ್ವಜನಿಕ ಕಲ್ಯಾಣ ಮತ್ತು ಇತರ ಸ್ಥಳೀಯ ವಿಷಯಗಳ ಬಗ್ಗೆ ಚರ್ಚೆಗಳ ಮೂಲಕ ಜನರ ಅಭಿಪ್ರಾಯವನ್ನು ರೂಪಿಸುತ್ತಿದ್ದಾರೆ' ಎಂದು ಮೂಲಗಳು ತಿಳಿಸಿವೆ.

         ಪ್ರಚಾರ ಕೆಲಸಕ್ಕೆ ತಂಡಗಳನ್ನು ರಚಿಸುವ ಮೊದಲು, ಆರ್‌ಎಸ್‌ಎಸ್‌ ಮತ್ತು ಅದರ ಅಂಗಸಂಸ್ಥೆಗಳ ಪದಾಧಿಕಾರಿಗಳು ಕಾರ್ಯತಂತ್ರವನ್ನು ರೂಪಿಸಲು ಸಮನ್ವಯ ಸಭೆಗಳನ್ನು ನಡೆಸಿದ್ದಾರೆ. ಈಚೆಗೆ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿರುವುದರಿಂದ, ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್‌ ಇಟ್ಟಿರುವ ಹೆಜ್ಜೆ ಮಹತ್ವ ಪಡೆದುಕೊಂಡಿದೆ.

ಆರ್‌ಎಸ್‌ಎಸ್‌, ಹರಿಯಾಣದಾದ್ಯಂತ ತನ್ನ ಅಂಗಸಂಸ್ಥೆಗಳೊಂದಿಗೆ ನಡೆಸಿದ್ದ ಸಭೆಗಳು ಅಲ್ಲಿ ಬಿಜೆಪಿಯ ಚುನಾವಣಾ ಯಶಸ್ಸಿನ ಹಿಂದಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಮೂಲಗಳು ಹೇಳಿವೆ. ಆಡಳಿತ ವಿರೋಧ ಅಲೆಯಿದ್ದರೂ, ಹರಿಯಾಣದಲ್ಲಿ 90 ರಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಹ್ಯಾಟ್ರಿಕ್‌ಗೆ ಗೆಲುವು ಸಾಧಿಸಿದೆ.

        ತಾನು ನೇರವಾಗಿ ಚುನಾವಣಾ ರಾಜಕೀಯದಲ್ಲಿ ಭಾಗಿಯಾಗುವುದಿಲ್ಲ ಎಂದು ಆರ್‌ಎಸ್‌ಎಸ್‌ ಹೇಳುತ್ತಾ ಬಂದಿದೆಯಾದರೂ, ಚುನಾವಣೆಯಲ್ಲಿ ಅದು ಬಿಜೆಪಿಯ ಗುಪ್ತ ಶಕ್ತಿಯಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

            ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷಕ್ಕೆ ಅನುಕೂಲಕರವಾದ ಸಾರ್ವಜನಿಕ ಆಭಿಪ್ರಾಯವನ್ನು ರೂಪಿಸಲು ಆರ್‌ಎಸ್‌ಎಸ್‌ ಕಾರ್ಯಕರ್ತರು ಅಖಾಡಕ್ಕೆ ಇಳಿದಿರುವುದು, ಮಹಾರಾಷ್ಟ್ರದ ಬಿಜೆಪಿ ನಾಯಕರಲ್ಲಿ ಆಶಾವಾದವನ್ನು ತುಂಬಿದೆ. ಹರಿಯಾಣದಲ್ಲಿ ಅನುಸರಿಸಿದ ತಂತ್ರವು ಮಹಾರಾಷ್ಟ್ರದಲ್ಲೂ ಯಶಸ್ವಿಯಾಗಬಹುದು ಎಂದು ಆಶಿಸುತ್ತಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries