HEALTH TIPS

ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸದ ಎಎಪಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ BJP

         ವದೆಹಲಿ: ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ದೆಹಲಿಯಲ್ಲಿ ಜಾರಿಗೊಳಿಸದ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ವಿರುದ್ಧ ದೆಹಲಿಯ ಬಿಜೆಪಿ ಸಂಸದರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.

          ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಎಎಪಿ ಸರ್ಕಾರ ಮತ್ತು ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಲಕ್ಷಾಂತರ ಅರ್ಹ ನಾಗರಿಕರನ್ನು ಆರೋಗ್ಯ ವಿಮಾ ಯೋಜನೆಯಿಂದ ವಂಚಿತರನ್ನಾಗಿಸಿದ್ದಾರೆ' ಎಂದು ಸಚ್‌ದೇವ ವಾಗ್ದಾಳಿ ನಡೆಸಿದ್ದಾರೆ.

            ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಜಾರಿಗೊಳಿಸಲಾಗುವುದು ಎಂದು ದೆಹಲಿ ವಿಧಾನಸಭೆಯಲ್ಲಿ ಅಂದಿನ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಈ ಹಿಂದೆ ಘೋಷಿಸಿದ್ದರು. ಈಗ ಎಎಪಿ ತನ್ನ ಭರವಸೆಯಿಂದ ಹಿಂದೆ ಸರಿಯುತ್ತಿದೆ ಎಂದು ಸಚ್‌ದೇವ ಟೀಕಿಸಿದ್ದಾರೆ.

             ದೆಹಲಿಯಲ್ಲಿರುವ ವೃದ್ಧರು ಮತ್ತು ಇತರ ಅರ್ಹ ನಾಗರಿಕರಿಗೆ ಯೋಜನೆಯ ಪ್ರಯೋಜನಗಳು ಲಭ್ಯವಾಗುವಂತೆ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆ ಜಾರಿ ಕುರಿತು ಮಂಗಳವಾರ ಪ್ರಸ್ತಾಪಿಸಿದ ಕೇಜ್ರಿವಾಲ್, 'ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾದ (ಸಿಎಜಿ) ಪ್ರಕಾರ ಆಯುಷ್ಮಾನ್ ಭಾರತ್ ಯೋಜನೆಯು ಹಲವು ಹಗರಣಗಳಿಂದ ಕೂಡಿದೆ. ಜತೆಗೆ, ದೆಹಲಿಯಲ್ಲಿ ನಮ್ಮ ಸರ್ಕಾರವು ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸುವುದರಿಂದ ಈ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವಿಲ್ಲ' ಎಂದು ಹೇಳಿದ್ದರು.

             ರೋಗಿಯನ್ನು ಆಸ್ಪತ್ರೆಗೆ ಸೇರಿಸಿದಾಗ ಮಾತ್ರ ಆಯುಷ್ಮಾನ್ ಭಾರತ್ ಯೋಜನೆ ಪ್ರಯೋಜನವಾಗಲಿದೆ. ಆದರೆ, ನಮ್ಮಲ್ಲಿ ₹5 ವೆಚ್ಚದ ಔಷಧಿಗಳಿಂದ ₹1 ಕೋಟಿ ವೆಚ್ಚದ ಆಪರೇಷನ್‌ವರೆಗೆ ಎಲ್ಲವೂ ಉಚಿತವಾಗಿ ನೀಡಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ದೆಹಲಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನಗೊಳಿಸುವ ಅಗತ್ಯತೆ ಇಲ್ಲ ಎಂದು ಕೇಜ್ರಿವಾಲ್‌ ಅವರು ಬಿಜೆಪಿಗರನ್ನು ಕುಟುಕಿದ್ದರು.

            70 ವರ್ಷ ಮೀರಿದ ಎಲ್ಲರಿಗೂ ಆಯುಷ್ಮಾನ್‌ ಭಾರತ್ ಯೋಜನೆ ಸೌಲಭ್ಯ ವಿಸ್ತರಣೆಯನ್ನು ಪ್ರಕಟಿಸಿದ ಪ್ರಧಾನಿ ನರೇಂದ್ರ ಮೋದಿ, ₹12,850 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಗಳಿಗೂ ಮಂಗಳವಾರ ಚಾಲನೆ ನೀಡಿದ್ದರು.

                ಇದೇ ವೇಳೆ ದೆಹಲಿಯ ಆಮ್‌ ಆದ್ಮಿ ಪಕ್ಷ (ಎಎಪಿ) ಹಾಗೂ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸರ್ಕಾರವು ರಾಜಕೀಯ ಕಾರಣಗಳಿಂದಾಗಿ 'ಆಯುಷ್ಮಾನ್ ಭಾರತ' ಯೋಜನೆಯನ್ನು ಜಾರಿಗೊಳಿಸಿಲ್ಲ' ಎಂದು ಮೋದಿ ವಾಗ್ದಾಳಿ ನಡೆಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries