ತಿರುವನಂತಪುರ: 'ತುಳಸಿ'ಯು ಶ್ರೀಕೃಷ್ಣನಿಗೆ ಅಚ್ಚುಮೆಚ್ಚಿನ ನೈವೇದ್ಯವಾಗಿದ್ದರೂ, ಹೆಚ್ಚು ಕೀಟನಾಶಕಗಳ ಇರುವಿಕೆಯಿಂದಾಗಿ ಕೇರಳದ ತ್ರಿಶೂರ್‌ನಲ್ಲಿರುವ ಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯದಲ್ಲಿ ನಿರ್ಬಂಧ ಹೇರಲಾಗಿದೆ.
ದೇವಾಲಯದ ಸಿಬ್ಬಂದಿ 'ತುಳಸಿ'ಯನ್ನು ಬಳಸುತ್ತಿರುವುದರಿಂದ ಅಲರ್ಜಿ ಮತ್ತು ತುರಿಕೆಯಂತಹ ಸಮಸ್ಯೆಗಳ ಬಗ್ಗೆ ಆಗಾಗ್ಗೆ ದೂರು ನೀಡುತ್ತಿದ್ದರು.
ಇದರಿಂದಾಗಿ ದೇವಾಲಯಕ್ಕೆ ಬರುವ ಭಕ್ತಾಧಿಗಳು 'ತುಳಸಿ'ಯನ್ನು ನೈವೇದ್ಯವಾಗಿ ತರದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
'ಬಹುತೇಕ ಯಾತ್ರಾರ್ಥಿಗಳು ಅಂಗಡಿಗಳಿಂದ ತುಳಸಿಯನ್ನು ನೈವೇದ್ಯವಾಗಿ ತರುತ್ತಾರೆ. ಹೆಚ್ಚಿನ ಪ್ರಮಾಣದ ಕೀಟನಾಶಕವನ್ನು ಬಳಸಿ ಮಾರಾಟದ ಉದ್ದೇಶಕ್ಕಾಗಿ ತುಳಸಿಯನ್ನು ಬೆಳೆಸಲಾಗುತ್ತದೆ. ಇದರಿಂದಾಗಿ ತುಳಸಿಯನ್ನು ಹೆಚ್ಚು ದಿನ ಸಂರಕ್ಷಿಸಲಾಗುತ್ತದೆ. ಕೀಟನಾಶಕ ಮಿಶ್ರಿತ ತುಳಸಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಅಲರ್ಜಿ ಮತ್ತು ತುರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ತುಳಸಿ ಬಳಸದಂತೆ ನಿರ್ಬಂಧ ಹೇರಲಾಗಿದೆ' ಎಂದು ದೇವಸ್ಥಾನದ ಸಿಬ್ಬಂದಿಯೊಬ್ಬರು 'ಡೆಕ್ಕನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.
ಸದ್ಯ ನೈವೇದ್ಯಕ್ಕಾಗಿ ತರುತ್ತಿದ್ದ ತುಳಸಿ ಪ್ರಮಾಣ ಕಡಿಮೆಯಾಗಿದೆ. ಪೂಜಾ ಉದ್ದೇಶಗಳಿಗಾಗಿ ಕೀಟನಾಶಕ ರಹಿತ ತುಳಸಿ ಪಡೆಯಲು ದೇವಸ್ಥಾನದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಹೂವು ಮತ್ತು ಎಲೆಯನ್ನು ಸೇವಿಸಿದ್ದ 24 ವರ್ಷದ ಯುವತಿಯೊಬ್ಬರು ಮೃತಪಟ್ಟಿದ್ದರು. ಬಳಿಕ ಹಲವು ದೇವಾಲಯಗಳಲ್ಲಿ ನೆರಿಯಮ್ ಒಲಿಯಾಂಡರ್ (ಮಲಯಾಳಂನಲ್ಲಿ 'ಅರಳಿ' ಎಂದು ಕರೆಯಲಾಗುತ್ತದೆ) ಬಳಕೆಗೆ ನಿರ್ಬಂಧ ಹೇರಲಾಗಿತ್ತು.
ಏಲಕ್ಕಿಯಲ್ಲಿ ಕೀಟನಾಶಕವಿದೆ ಎಂದು ಶಂಕಿಸಲಾಗಿದ್ದು, ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಜನಪ್ರಿಯ 'ಅರವಣ' ಪ್ರಸಾದದ 6.65 ಲಕ್ಷ ಕಂಟೇನರ್‌ಗಳನ್ನು ತಿರಸ್ಕರಿಸಲಾಗಿತ್ತು.