ಕಾಸರಗೋಡು: ಉದ್ಯೋಗ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಪ್ರಕರಣದ ಆರೋಪಿ, ಮಾಜಿ ಡಿವೈಎಫ್‍ಐ ನೇತಾರೆ ಹಾಗೂ ಪುತ್ತಿಗೆ ಪಂಚಾಯಿತಿ ಬಾಡೂರು ಎಎಲ್‍ಪಿ ಶಾಲಾ ಶಿಕ್ಷಕಿ ಸಚಿತಾ ರೈ (27)ಯನ್ನು ಕಾಸರಗೋಡು ಜ್ಯುಡಿಶಿಯಲ್ ಪ್ರಥಮ ದರ್ಜೆ ನ್ಯಾಯಾಲಯ(ಪ್ರಥಮ)ಕ್ಕೆ ಹಾಜರುಪಡಿಸಲಾಗಿದ್ದು, ಈಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಚಿತ ರೈಯನ್ನು ಕಣ್ಣೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಗುರುವಾರ ನ್ಯಾಯಾಲಯಕ್ಕೆ ಶರಣಾಗಲು ಕಾಸರಗೋಡು ವಿದ್ಯಾನಗರಕ್ಕೆ ತನ್ನ ಎಳೆಯ ಮಗುವಿನೊಂದಿಗೆ ಆಗಮಿಸಿದ ಈಕೆಯನ್ನು ಕಾಸರಗೋಡು ಡಿವ್ಯೆಸ್‍ಪಿ ಸಿ.ಕೆ ಸುನಿಲ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಹಲವರಿಂದ ಪಡೆದುಕೊಂಡ 78ಲಕ್ಷ ರೂ. ಮೊತ್ತವನ್ನು ಕುಂಜಾರು ನಿವಾಸಿ ಚಂದ್ರಶೇಖರ ಎಂಬವರಿಗೆ ನೀಡಲಾಗಿದೆ. ಇದಕ್ಕೆ ಪುರಾವೆಯಾಗಿ ಇ ಮೊತ್ತದ ಚೆಕ್ ಪಡೆದುಕೊಂಡಿದ್ದು, ಇದು ತನ್ನ ಬಳಿಯಿರುವುದಗಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ. ಕುಂಬಳೆ, ಮಂಜೇಶ್ವರ, ಬದಿಯಡ್ಕ ಹಾಗೂ ಉಪ್ಪಿನಂಗಡಿ ಠಾಣೆಗಳಲ್ಲಿ ವಂಚನಾ ಪ್ರಕರಣಕ್ಕೆ ಸಂಬಂಧಿಸಿ 12ಪ್ರಕರಣಗಳು ದಾಖಲಾಗಿದೆ.