ಪಟ್ನಾ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಖ್ಯಾತ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ 'ಜನ ಸುರಾಜ್ ' ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಮೂಲಕ ಬಿಹಾರ ರಾಜಕೀಯದಲ್ಲಿ ಹೊಸ ಅಲೆ ಪ್ರಾರಂಭವಾಗಿದೆ ಎನ್ನಲಾಗಿದೆ.
ನಗರದ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ಜನ ಸುರಾಜ್' ಪಕ್ಷವನ್ನು ಘೋಷಿಸಲಾಯಿತು.
ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 243 ಕ್ಷೇತ್ರಗಳಲ್ಲಿ 'ಜನ ಸುರಾಜ್' ಪಕ್ಷ ಸ್ಪರ್ಧಿಸಲಿದೆ ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದರು.
'ಜನ ಸುರಾಜ್ ಆಂದೋಲನ'ವು ಕನಿಷ್ಠ 1 ಕೋಟಿ ಜನರ ಬೆಂಬಲದೊಂದಿಗೆ ಬರುವ ಅಕ್ಟೋಬರ್ 2ರಂದು ಪರಿಪೂರ್ಣ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. ಪಕ್ಷವು ರಾಜ್ಯದ ಒಂದೇ ಒಂದು ಕ್ಷೇತ್ರವನ್ನೂ ಬಿಡದೆ, ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ನಮಗೆ ಯಾವುದೇ ಪಕ್ಷಗಳ ಜೊತೆಗೆ ಮೈತ್ರಿಯ ಅವಶ್ಯಕತೆ ಇಲ್ಲ' ಎಂದು ಇತ್ತೀಚೆಗೆ ಪ್ರಶಾಂತ್ ಕಿಶೋರ್ ತಿಳಿಸಿದ್ದರು.
ಬಿಹಾರದ ಇಂದಿನ ದುಸ್ಥಿತಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರೇ ಹೊಣೆ ಎಂದು ಆಪಾದಿಸಿರುವ ಅವರು, ರಾಜ್ಯದಲ್ಲಿ ಪ್ರಸ್ತುತ ಮದ್ಯದ ಮೇಲೆ ಹೇರಲಾಗಿರುವ ನಿಷೇಧವನ್ನು ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ರದ್ದುಪಡಿಸುವುದಾಗಿಯೂ ಹೇಳಿದ್ದರು.