ಉಪ್ಪಳ: ಕಂದಾಯ ಮಟ್ಟದ ವಿಜ್ಞಾನ ಮೇಳ, ಕಲಾಮೇಳಗಳ ನಂತರ ಉಪ್ಪಳದಲ್ಲಿ ವಿದ್ಯಾರ್ಥಿಗಳ ಸಂಘರ್ಷಕ್ಕೆ ಕಡಿವಾಣ ಬಿದ್ದಿಲ್ಲ. ರಸ್ತೆ ಮತ್ತು ಶಾಲಾ ಆವರಣದಲ್ಲಿ ಹಿರಿಯ-ಕಿರಿಯ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೋಷÀಕರಲ್ಲಿ ಸಂಚಲನ ಮೂಡಿಸುತ್ತಿದೆ. ಜಿಲ್ಲೆಯ ಬಹುತೇಕ ಶಾಲೆಗಳ ಸ್ಥಿತಿ ಇದೇ ಆಗಿದೆ.
ಕಳೆದ ವಾರ ಮೊಗ್ರಾಲ್ ಶಾಲೆಯಲ್ಲಿ ವಿದ್ಯಾರ್ಥಿಗಳು ಈ ರೀತಿ ಜಗಳ ಮಾಡಿಕೊಂಡಿದ್ದರು. ಇದೀಗ ಶಾಲಾ ಆವರಣದ ಹೊರಗೆ ಸಾಮೂಹಿಕ ಥಳಿತಗಳು ನಡೆಯುವುದರಿಂದ ಶಾಲಾ ಅಧಿಕಾರಿಗಳು ಮತ್ತು ಪಿಟಿಎ ಮಧ್ಯಪ್ರವೇಶಿಸಲು ಅಸಹಾಯಕರಾಗಿದ್ದಾರೆ. ಶಾಲೆಯ ಅಧಿಕಾರಿಗಳಿಂದ ದೂರು ಸ್ವೀಕರಿಸಿದ ನಂತರವೇ ಪೋಲೀಸರು ಮಧ್ಯಪ್ರವೇಶಿಸುತ್ತಾರೆ. ಆಗಾಗ ಘಟಿಸುವ ಘರ್ಷಣೆಗಳಲಲಿ ಪೋಲೀಸರ ನಿಧಾನಗತಿಯ ಆಗಮನ ಸಂಘರ್ಷ ವ್ಯಾಪಿಸಲು ಕಾರಣವಾಗುತ್ತಿದೆ.
ಶಾಲಾ ಆವರಣದಲ್ಲಿ ಘರ್ಷಣೆ ನಡೆದರೆ ರ್ಯಾಗಿಂಗ್ ನಿಗ್ರಹ ಕಾನೂನಿನ ವ್ಯಾಪ್ತಿಗೆ ಬರುವ ಭಯವೇ ವಿದ್ಯಾರ್ಥಿಗಳು ಶಾಲಾ ಆವರಣದ ಹೊರಗೆ ಘರ್ಷಣೆ-ಹ್ಯೊಕೈ ನಡೆಸಲು ಕಾರಣ ಎಂದು ಶಿಕ್ಷಕರು ಹಾಗೂ ಪಿಟಿಎ ಹೇಳುತ್ತವೆ. ಕೊನೆಗೆ ಸ್ಥಳೀಯರೇ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳನ್ನು ಸಂಘರ್ಷದಿಂದ ದೂರವಿಡುತ್ತಾರೆ.
ಉಪ್ಪಳ ಪೇಟೆ ಮತ್ತು ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳನ್ನು ಅಮಾನುಷವಾಗಿ ಥಳಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ ನಂತರ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಯಿತು. ರಸ್ತೆಯಲ್ಲೇ ವಿದ್ಯಾರ್ಥಿಗೆ ಥಳಿಸಿದ ದೃಶ್ಯ ಕಣ್ಣೀರು ತರಿಸುವಂತಿತ್ತು. ಆದರೆ ಸಂತ್ರಸ್ತ ವಿದ್ಯಾರ್ಥಿಗಳು ದೂರು ನೀಡಲು ಮುಂದಾಗದಿರುವುದು ಪ್ರಕರಣ ದಾಖಲಿಸಲು ಹಿನ್ನಡೆಗೆ ಕಾರಣವಾಗುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ವಿಡಿಯೋಗಳನ್ನು ನೋಡಿದ ಪೋಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂಬ ಅಸಮಾಧಾನ ಸ್ಥಳೀಯರಲ್ಲಿ ಮೂಡಿದೆ. ಆದ್ದರಿಂದ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಮಕ್ಕಳ ಹಕ್ಕುಗಳ ಆಯೋಗ ಅಥವಾ ಮಾನವ ಹಕ್ಕುಗಳ ಆಯೋಗದ ಮಧ್ಯಸ್ಥಿಕೆ ವಹಿಸುವ ಅಗತ್ಯವಿದೆ.