ನವದೆಹಲಿ:ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ, ಬ್ಲಾಕ್ಬಸ್ಟರ್ 'ಕಾಂತಾರ' ಚಿತ್ರದಲ್ಲಿನ ಅಮೋಘ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ (Best Actor Award) ಪಡೆದ ನಟ ರಿಷಬ್ ಶೆಟ್ಟಿ (Rishab Shetty), ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕನ್ನಡಿಗರಲ್ಲಿ ಭಾರೀ ಸಂತಸವನ್ನು ಉಂಟುಮಾಡಿದೆ.
70ನೇ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದ ನಟ ರಿಷಬ್ ಶೆಟ್ಟಿ, ಕಾಂತಾರ ಚಿತ್ರಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ್ದಾರೆ. ದ್ರೌಪದಿ ಮುರ್ಮು ಅವರಿಂದ ಈ ಪ್ರಶಸ್ತಿ ಪಡೆದಿದ್ದು, ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ. 2022ರಿಂದಲೂ ಕಾಂತಾರ ಕಂಪು ಜಾಗತಿಕವಾಗಿ ಪಸರಿಸಿದ್ದು, ಇತರೆ ಚಿತ್ರರಂಗದ ಗಣ್ಯುರು ಇದೀಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುತ್ತಿದ್ದಾರೆ. ಸ್ಯಾಂಡಲ್ವುಡ್ನೊಂದಿಗೆ ನಾವು ಕೈಜೋಡಿಸಬೇಕು, ಅವರೊಟ್ಟಿಗೆ ಸಿನಿಮಾ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿರುವುದು ಕನ್ನಡ ಸಿನಿರಂಗದ ಹಿರಿಮೆಯನ್ನು ಹೆಚ್ಚಿಸಿದೆ.
ಇನ್ನು ಇದೇ ವೇದಿಕೆಯಲ್ಲಿ 'ತಿರುಚಿತ್ರಾಂಬಲಂ' ಚಿತ್ರಕ್ಕಾಗಿ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಕನ್ನಡತಿ, ಬಹುಭಾಷಾ ತಾರೆ ನಿತ್ಯಾ ಮೆನನ್, ರಾಷ್ಟ್ರಪತಿಯಿಂದ ಈ ಅವಾರ್ಡ್ ಸ್ವೀಕರಿಸಿದ್ದಾರೆ. ಒಂದೇ ಸಮಾರಂಭದಲ್ಲಿ ಇಬ್ಬರು ಕನ್ನಡಿಗರು ರಾಷ್ಟ್ರಪ್ರಶಸ್ತಿ ಪಡೆದಿರುವುದು ಇಡೀ ಕನ್ನಡ ಜನತೆಗೆ ಅವಿಸ್ಮರಣಿಯ ಕ್ಷಣವಾಗಿದೆ ಎಂದರೆ ಖಂಡಿತ ತಪ್ಪಾಗಲಾರದು.