ಹೈದರಾಬಾದ್: ನಾಲ್ಕು ರಾಷ್ಟ್ರಗಳ ನೌಕಾಪಡೆಗಳನ್ನು ಒಳಗೊಂಡ 'ಮಲಬಾರ್ ಸಮರಾಭ್ಯಾಸ-2024'ನ 28ನೇ ಆವೃತ್ತಿಯ ತಾಲೀಮು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಬುಧವಾರ ಆರಂಭವಾಯಿತು.
ಅಕ್ಟೋಬರ್ 18ರವರೆಗೆ ಬಂದರು ಮತ್ತು ಸಮುದ್ರದಲ್ಲಿ ತಾಲೀಮು ನಡೆಯಲಿದೆ. ಈ ಸಂದರ್ಭದಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ನೌಕಾಪಡೆಗಳು ಹಲವು ಸಂಕೀರ್ಣ ಅಭ್ಯಾಸಗಳನ್ನು ನಡೆಸಲಿವೆ.
ಕ್ಷಿಪಣಿ ನಿರೋಧಕಗಳು, ಜಲಾಂತರ್ಗಾಮಿ ಪ್ರತಿಬಂಧಕಗಳು, ಬಹು ಕಾರ್ಯಕ್ಕೆ ಬಳಕೆಯಾಗುವ ಹಡಗುಗಳು, ಜಲಾಂತರ್ಗಾಮಿಗಳು, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿ ಅಭ್ಯಾಸ ನಡೆಸಲಾಗುತ್ತದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ನಾಲ್ಕು ದೇಶಗಳ ನೌಕಾಪಡೆ ಮತ್ತು ಸೇನೆಯ ಪ್ರಮುಖ ಗೌರವಾನ್ವಿತರು ಭಾಗಿಯಾಗಿದ್ದರು.
ಅಮೆರಿಕ ಮತ್ತು ಭಾರತದ ನೌಕಾಪಡೆಗಳ ದ್ವಿಪಕ್ಷೀಯ ಸಂಬಂಧ ವೃದ್ಧಿ ಉದ್ದೇಶದಿಂದ 1992ರಲ್ಲಿ ಮಲಬಾರ್ ಸಮರಾಭ್ಯಾಸ ಆರಂಭಿಸಲಾಯಿತು. ನಂತರ ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಸೇರ್ಪಡೆಗೊಳಿಸಲಾಗಿದೆ.