ಬ್ರಸೆಲ್ಸ್: ಉತ್ತರ ಕೊರಿಯಾದ 10 ಸಾವಿರ ಸೈನಿಕರು ತಮ್ಮ ದೇಶದ ವಿರುದ್ಧ ಹೋರಾಡುತ್ತಿರುವ ರಷ್ಯಾದ ಸೇನೆಗೆ ಸೇರಲು ಸಿದ್ಧರಾಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
'ಉಕ್ರೇನ್-ರಷ್ಯಾ ನಡುವಣ ಯುದ್ಧದಲ್ಲಿ ಮೂರನೇ ರಾಷ್ಟ್ರವೊಂದು ತಲೆಹಾಕಿದರೆ, ಈಗ ನಡೆಯುತ್ತಿರುವ ಸಂಘರ್ಷವು ವಿಶ್ವ ಯುದ್ಧವಾಗಿ ಪರಿವರ್ತನೆಯಾಗಲಿದೆ' ಎಂದು ಎಚ್ಚರಿಸಿದ್ದಾರೆ.
'ಉತ್ತರ ಕೊರಿಯಾವು ಯುದ್ಧತಂತ್ರ ನಿಪುಣರು ಮತ್ತು ಸೇನೆಯ ಕೆಲವು ಅಧಿಕಾರಿಗಳನ್ನು ರಷ್ಯಾಕ್ಕೆ ಕಳುಹಿಸಿರುವ ಮಾಹಿತಿ ನಮಗೆ ಲಭಿಸಿದೆ' ಎಂದು ಝೆಲೆನ್‌ಸ್ಕಿ ಅವರು ನ್ಯಾಟೊ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. '10 ಸಾವಿರ ಸೈನಿಕರನ್ನು ತಮ್ಮದೇ ನೆಲದಲ್ಲಿ ಅಣಿಗೊಳಿಸುತ್ತಿದ್ದಾರೆ. ಅವರನ್ನು ಉಕ್ರೇನ್ ಅಥವಾ ರಷ್ಯಾಕ್ಕೆ ಇನ್ನಷ್ಟೇ ಕಳುಹಿಸಬೇಕಿದೆ' ಎಂದಿದ್ದಾರೆ.
ಯಾವುದೇ ಪುರಾವೆ ಸಿಕ್ಕಿಲ್ಲ: 'ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಉತ್ತರ ಕೊರಿಯಾ ಸೈನಿಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಲಭಿಸಿಲ್ಲ. ಆದರೆ ಉತ್ತರ ಕೊರಿಯಾವು ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನ ಪೂರೈಸುವ ಮೂಲಕ ರಷ್ಯಾಕ್ಕೆ ನೆರವಾಗುತ್ತಿದೆ ಎಂಬುದು ನಮಗೆ ತಿಳಿದಿರುವ ವಿಚಾರ' ಎಂದು ನ್ಯಾಟೊ ಮಹಾ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟೆ ಹೇಳಿದ್ದಾರೆ.
12 ಸಾವಿರ ಯೋಧರು ಸಜ್ಜು (ಸೋಲ್ ವರದಿ): ಉಕ್ರೇನ್ ವಿರುದ್ದದ ಯುದ್ಧದಲ್ಲಿ ರಷ್ಯಾವನ್ನು ಬೆಂಬಲಿಸಲು ಉತ್ತರ ಕೊರಿಯಾವು ವಿಶೇಷ ಕಾರ್ಯಾಚರಣೆ ಪಡೆಗಳು ಸೇರಿದಂತೆ 12 ಸಾವಿರ ಸೈನಿಕರನ್ನು ಕಳುಹಿಸಿರುವುದನ್ನು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ಪತ್ತೆ ಮಾಡಿದೆ ಎಂದು 'ಯೊನ್‌ಹಾಪ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಷ್ಯಾ ಸೇನೆಯನ್ನು ಸೇರಲು ಉತ್ತರ ಕೊರಿಯಾದ ಪಡೆಗಳು ಈಗಾಗಲೇ ದೇಶವನ್ನು ತೊರೆದಿವೆ ಎಂದು ಗುಪ್ತಚರ ಸಂಸ್ಥೆಯನ್ನು ಉಲ್ಲೇಖಿಸಿ ವರದಿ ತಿಳಿಸಿದೆ.