ಕಾಸರಗೋಡು: ಹೊಲ, ಜೌಗು ಪ್ರದೇಶಗಳಿಗೆ ಅನಧಿಕೃತವಾಗಿ ಮಣ್ಣು ತುಂಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಮತ್ತು ವಸತಿ ಖಾತೆ ಸಚಿವ ಕೆ.ರಾಜನ್ ತಿಳಿಸಿದರು. ಅವರು ಕಾಞಂಗಾಡ್ ಮುನ್ಸಿಪಲ್ ಟೌನ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಭೂಪರಿವರ್ತನಾ ಅದಾಲತ್‍ನ ರಾಜ್ಯಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜೌಗು ಪ್ರದೇಶ ಮತ್ತು ಭತ್ತದ ಗದ್ದೆ ಸಂರಕ್ಷಣಾ ಕಾಯ್ದೆಯು ಕೇವಲ ಭೂಮಿಯ ಸ್ವರೂಪವನ್ನು ಬದಲಾಯಿಸಲು ಮಾತ್ರವಲ್ಲದೆ ಪರಿಸರ ಸಂರಕ್ಷಣೆಯಲ್ಲೂ ಮಹತ್ವದ ಪಾತ್ರ ವಹಿಸುತ್ತಿದೆ. 2008ರ ಜೌಗು ಪ್ರದೇಶ ಮತ್ತು ಭತ್ತದ ಗದ್ದೆ ತುಂಬುವಿಕೆ ತಡೆ ಕಾಯ್ದೆ ಜಾರಿಯಾದ ನಂತರ ಇಂತಹ ಜಮೀನಿಗೆ ತುಂಬಿದ ಮಣ್ಣು ತೆರವುಗೊಳಿಸುವ ನಿಟ್ಟಿನಲ್ಲಿ ಎಲ್ಲ 14ಜಿಲ್ಲೆಗಳ ಜಿಲ್ಲಾಧಿಕಾರಿಯ ಆವರ್ತ ನಿಧಿಗೆ ತಲಾ 2ಕೋಟಿ ರೂ. ಮಂಜೂರು ಮಾಡಲಾಗುವುದು. ಅಕ್ರಮವಾಗಿ ತುಂಬಿದ ಜಮೀನಿನ ಮಣ್ಣು ತೆಗೆಯಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಮಣ್ಣು ತೆರವುಗೊಳಿಸದಿದ್ದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಜಮೀನಿನಿಂದ ಮಣ್ಣು ತೆಗೆದು ಮಾಲೀಕರಿಂದ ಅಗತ್ಯ ಮೊತ್ತವನ್ನು ವಸೂಲಿ ಮಾಡಲು ಕ್ರಮಕೈಗೊಳ್ಳಲಿದ್ದಾರೆ. ಯಾವುದೇ ಅಕ್ರಮ ಕಂಡುಬಂದಲ್ಲಿ ಮಣ್ಣು ತೆರವುಗೊಳಿಸಲು ಮಾಲೀಕರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗುತ್ತದೆ. ನಂತರ ಜಿಲ್ಲಾಧಿಕಾರಿಗಳ ಕ್ರಮ ಮುಂದುವರಿಯಲಿದೆ. ಇಂತಹ ಜಾಗದ ಬದಲಾವಣೆಗಾಗಿ ಫಾರ್ಮ್-5ನೇ ಅರ್ಜಿ ನಮೂನೆ ಸ್ವೀಕರಿಸುವುದನ್ನು ಮುಂದುವರಿಸಬೇಕೆ ಎಂಬ ಬಗ್ಗೆ ಪರಿಶೀಲಿಸಬೇಕಾಗಿದೆ ಎಂದು ಸಚಿವರು ಹೇಳಿದರು. ಕಾಞಂಗಾಡು ಆರ್‍ಡಿಓ ಕಚೇರಿಯಲ್ಲಿ 25 ಸೆಂಟ್ಸ್‍ಗಿಂತ ಕಡಿಮೆ ಜಮೀನು ಹೊಂದಿರುವವರು ಜಾಗದ ಸ್ವಬವ ಬದಲಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ನವೆಂಬರ್ 30ರೊಳಗೆ ವಿಲೇವಾರಿ ಮಾಡುವಂತೆ ಸಚಿವರು ಸೂಚಿಸಿದರು. ಮನೆ ನಿರ್ಮಾಣಕ್ಕೆ ಬೇರೆ ಎಲ್ಲಿಯೂ ಜಮೀನು ಹೊಂದಿರದಿದ್ದಲ್ಲಿ ನಮೂನೆ ಸಂಖ್ಯೆ 1ರಲ್ಲಿ ಅರ್ಜಿ ಸಲ್ಲಿಸಿದರೆ ನಗರ ಪ್ರದೇಶದಲ್ಲಿ 5 ಸೆಂಟ್ಸ್ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸೆಂಟ್ಸ್ ಹೊಂದಿರುವ ಜಾಗವನ್ನು ಮಾದರಿ ಬದಲಾಯಿಸದೇ ಮನೆ ನಿರ್ಮಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸಚಿವರು ತಿಳಿಸಿದರು. ಭೂ ಮರು ವರ್ಗೀಕರಣ ಅರ್ಜಿಗಳಲ್ಲಿ ಶೀಘ್ರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅದಾಲತ್‍ನಲ್ಲಿ ಬದಲಾವಣೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಶಾಸಕ ಇ.ಚಂದ್ರಶೇಖರನ್ ಅದ್ಯಕ್ಷತೆ ವಹಿಸಿದ್ದರು. ಶಾಸಕ ಎಂ. ರಾಜಗೋಪಾಲನ್ ಮುಖ್ಯ ಅತಿಥಿಯಾಗಿದ್ದರು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್, ನಗರಸಭಾ ವಾರ್ಡ್ ಕೌನ್ಸಿಲರ್ ವಂದನಾ ಬಾಲರಾಜ್, ಎಡಿಎಂ. ಪಿ.ಅಖಿಲ್, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್ ವಂದಿಸಿದರು.