ಕಾಸರಗೋಡು: ರಾಷ್ಟ್ರೀಯ ಸೈಬರ್ ಭದ್ರತಾ ಮಾಸಾಚರಣೆ ಹಿನ್ನೆಲೆಯಲ್ಲಿ ಕೇರಳದಲ್ಲಿನ ಸೈಬರ್ ಅಪರಾಧಗಳ ಬಗ್ಗೆ ನಡೆಸಲಾದ ಅವಲೋಕನದಲ್ಲಿ ಏಳು ವರ್ಷಗಳ ಕಾಲಾವಧಿಯಲ್ಲಿ ಕೇರಳದಲ್ಲಿನ ಸೈಬರ್ ಅಪರಾಧಗಳ ಸಂಖ್ಯೆ ಹನ್ನೊಂದು ಪಟ್ಟು ಹೆಚ್ಚಳಗೊಂಡಿರುವುದಾಗಿ ಲೆಕ್ಕಾಚಾರ ಲಭಿಸಿದೆ.
ರಾಜ್ಯದಲ್ಲಿ 2016ರಲ್ಲಿ 283 ಸೈಬರ್ ಅಪರಾಧಗಳು ದಾಖಲಾಗಿದ್ದರೆ, ಈ ಸಂಖ್ಯೆ 2023ರ ಮಾರ್ಚ್ ವೇಳೆಗೆ 3295ಕ್ಕೆ ಏರಿಕೆಯಾಗಿದೆ. 2024ರ ಆಗಸ್ಟ್ ವೇಳೆಗೆ ಈ ಸಂಖ್ಯೆ 2446ಕ್ಕೆ ಏರಿಕೆಯಾಗಿದೆ. ಕೇರಳ ಮಾತ್ರವಲ್ಲ ವಿಶ್ವಾದ್ಯಂತ ಸೈಬರ್ ಅಪರಾಧಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದಾಗಿ ಲೆಕ್ಕಾಚಾರ ತಿಳಿಸಿದೆ. 'ನಮ್ಮ ವಿಶ್ವವನ್ನು ಸುರಕ್ಷಿತವಾಗಿರಿಸಿ'ಎಂಬ ಘೋಷಣೆಯೊಂದಿಗೆ ಈ ಬಾರಿ ಸೈಬರ್ ಭದ್ರತಾ ಮಾಸಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೈಬರ್ ದಾಳಿ, ಸೈಬರ್ ವಂಚನೆ ಸೇರಿದಂತೆ ವಿವಿಧ ಅಪರಾದಗಳ ಬಗ್ಗೆ ಜನಜಾಗೃತಿ ಮೂಡಿಸುವ ಅಭಿಯಾನವನ್ನು ಕೇರಳಾದ್ಯಂತ ಪೊಲೀಸರು ಆರಂಭಿಸಿದ್ದಾರೆ. ಸೈಬರ್ ವಂಚನೆಗಳ ಬಗ್ಗೆ ಜನರು ಅಲ್ಪ ಜಾಗೃತರಾಗಿದ್ದಲ್ಲಿ, ಇಂತಹ ವಂಚನೆಗಳಿಂದ ಪಾರಾಗಬಹುದು ಎಂಬುದಾಗಿ ಸೈಬರ್ ತಜ್ಞರು ಸಲಹೆ ನೀಡುತ್ತಾರೆ. ಸೈಬರ್ ವಂಚನೆಗೊಳಗಾಗಿ ಅನೇಕ ಮಂದಿ ಕೋಟ್ಯಂತರ ರೂ. ಕಳೆದುಕೊಳ್ಳುತ್ತಿದ್ದರೆ. ಅಕರ್ಷಕ ಉದ್ಯೋಗ, ಸಾಲ ಯೋಜನೆ, ವಿಸಾ ನೀಡುವಿಕೆ, ವ್ಯಾಪಾರ ಸೇರಿದಂತೆ ವಿವಿಧ ಹೆಸರಲ್ಲಿ ಹಣ ದೋಚುತ್ತಿದ್ದಾರೆ. ಈ ರೀತಿಯ ಹಣದ ವಂಚನೆಗೊಳಗಾದವರು ತಕ್ಷಣ 1930 ಎಂಬ ಸಂಖ್ಯೆಗೆ ಕರೆಮಾಡಿ ದೂರು ದಾಖಲಿಸಿಕೊಳ್ಳುವಂತೆಯೂ ಪೊಲೀಸರು ಸೂಚನೆ ನೀಡಿದ್ದಾರೆ.