ನವದೆಹಲಿ: ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿರುವ ಒಮರ್ ಅಬ್ದುಲ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನವದೆಹಲಿ: ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿರುವ ಒಮರ್ ಅಬ್ದುಲ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಲ್ಲದೆ ಜಮ್ಮು-ಕಾಶ್ಮೀರದ ಪ್ರಗತಿಗಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಜತೆಗೂಡಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.
'ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಮರ್ ಅಬ್ದುಲ್ಲಾ ಅವರಿಗೆ ಅಭಿನಂದನೆಗಳು. ಜನರ ಸೇವೆ ಮಾಡುವ ಅವರ ಪ್ರಯತ್ನಕ್ಕೆ ಶುಭ ಹಾರೈಕೆಗಳು. ಜಮ್ಮು-ಕಾಶ್ಮೀರದ ಪ್ರಗತಿಗಾಗಿ ಒಮರ್ ಮತ್ತು ಅವರ ತಂಡದೊಂದಿಗೆ ಜತೆಗೂಡಿ ಕೇಂದ್ರ ಸರ್ಕಾರವು ನಿಕಟವಾಗಿ ಕಾರ್ಯ ನಿರ್ವಹಿಸಲಿದೆ' ಎಂದು ಹೇಳಿದ್ದಾರೆ.
ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರತಿಜ್ಞಾವಿಧಿ ಬೋಧಿಸಿದರು.
ಒಮರ್ ಅಬ್ದುಲ್ಲಾ ಜೊತೆ ಐದು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಕೀನಾ ಮಸೂದ್, ಜಾವೇದ್ ದಾರ್, ಜಾವೇದ್ ರಾಣಾ, ಸುರೀಂದರ್ ಚೌಧರಿ ಮತ್ತು ಸತೀಶ್ ಶರ್ಮಾ ಪ್ರಮಾಣ ವಚನ ಸ್ವೀಕರಿಸಿದರು.
2019ರಲ್ಲಿ ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮೊದಲ ಚುನಾಯಿತ ಸರ್ಕಾರ ರಚನೆಗೊಂಡಿದೆ.