ತಿರುವನಂತಪುರ: ಭೂಕುಸಿತ ದುರಂತ ಸಂಭವಿಸಿದ ವಯನಾಡಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರವು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ.ರಾಜೇಶ್ ಅವರು ನಿರ್ಣಯವನ್ನು ಸೋಮವಾರ ಸದನದ ಮುಂದೆ ಮಂಡಿಸಿದರು.
ಈ ವೇಳೆ ಅವರು, ವಯನಾಡಿನ ಮೆಪ್ಪಾಡಿ ಪಂಚಾಯಿತಿ ವ್ಯಾಪ್ತಿಯ ಚೂರಲ್‌ಮಲ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಪ್ರದೇಶಗಳಲ್ಲಿ ಭೂಕುಸಿತದಿಂದ ಆಗಿರುವ ವಿನಾಶದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ವಿಸ್ತೃತ ವರದಿ ಸಲ್ಲಿಸಲಾಗಿದೆ. ತಕ್ಷಣದ ನೆರವು ಬಿಡುಗಡೆಯಾಗಿಲ್ಲ. ಕೇಂದ್ರದಿಂದ ನೆರವು ವಿಳಂಬವಾಗುತ್ತಾ ಸಾಗಿದರೆ, ದುರಂತದ ವೇಳೆ ಬದುಕುಳಿದವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಒತ್ತಿಹೇಳಿದ್ದಾರೆ.
ದೇಶದಲ್ಲಿ ವರದಿಯಾದ ಅತ್ಯಂತ ಭೀಕರ ಭೂಕುಸಿತ ಇದಾಗಿದ್ದು, ಜಿಲ್ಲೆಯನ್ನು ಸಂಪೂರ್ಣ ಹಾಳುಮಾಡಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದ್ದು, ಶೀಘ್ರದಲ್ಲೇ ಹಣಕಾಸು ನೆರವು ನೀಡಲು ಕೇಂದ್ರ ಸರ್ಕಾರ ಕ್ರಮಗೊಳ್ಳಬೇಕು ಮತ್ತು ಸಂತ್ರಸ್ತರು ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಪ್ರಧಾನಿ ಮೋದಿ ಅವರು ವಯನಾಡ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಇಂತಹ ಬೇಡಿಕೆ ಇಟ್ಟಿದ್ದೆವು ಎಂದು ಸಚಿವರು ನೆನಪಿಸಿಕೊಂಡಿದ್ದಾರೆ.
ಇಂತಹ ಪ್ರಾಕೃತಿಕ ವಿಪತ್ತಿನ ಪರಿಸ್ತಿತಿಯನ್ನು ಎದುರಿಸಿದ ಹಲವು ರಾಜ್ಯಗಳು ಮನವಿ ಸಲ್ಲಿಸುವ ಮುನ್ನವೇ ಪರಿಹಾರ ಪಡೆದುಕೊಂಡಿವೆ. ಆದರೆ, ಕೇರಳದ ಮನವಿಯನ್ನು ಕೇಂದ್ರ ಪರಿಗಣಿಸದಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ಬಳಿಕ ಸ್ಪೀಕರ್ ಎ.ಎನ್.ಶಮೀರ್ ಅವರು, ಸದನವು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಘೋಷಿಸಿದ್ದಾರೆ.