ಕೊಚ್ಚಿ: ನಟಿಯ ಮೇಲಿನ ಹಲ್ಲೆಯ ದೃಶ್ಯಗಳಿರುವ ಮೆಮೊರಿ ಕಾರ್ಡ್ ಅನ್ನು ಅನಧಿಕೃತವಾಗಿ ತೆರೆದು ಪರಿಶೀಲಿಸಿದ್ದರ ವಿರುದ್ಧ ಸಂತ್ರಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಎರ್ನಾಕುಳಂ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ನಡೆಸಿರುವ ಸತ್ಯಶೋಧನಾ ವರದಿಯನ್ನು ರದ್ದುಪಡಿಸಬೇಕು ಮತ್ತು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಮರು ತನಿಖೆ ನಡೆಸಬೇಕು ಎಂಬುದು ಸಂತ್ರಸ್ಥೆಯ ಆಗ್ರಹವಾಗಿತ್ತು.
ಆದರೆ ಈ ಹಿಂದೆ ಇತ್ಯರ್ಥಗೊಂಡಿರುವ ಅರ್ಜಿಯಲ್ಲಿ ಯಾವುದೇ ಹೊಸ ಬೇಡಿಕೆಗಳನ್ನು ಎತ್ತುವಂತಿಲ್ಲ ಮತ್ತು ಇದಕ್ಕೆ ಸಂಬಂಧಿಸಿದ ಅರ್ಜಿಯು ಕಾನೂನಾತ್ಮಕವಾಗಿ ಸಾದುವಾಗದು ಎಂದು ನ್ಯಾಯಮೂರ್ತಿ ಸಿ.ಎಸ್.ಡಯಾಸ್ ಸೂಚಿಸಿದ ಹಿನ್ನೆಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶರ ತನಿಖಾ ವರದಿಯು ಟ್ರಯಲ್ ಕೋರ್ಟ್ ಸೇರಿದಂತೆ ಮೂರು ನ್ಯಾಯಾಲಯಗಳ ವಿಚಾರಣೆಯಲ್ಲಿರುವಾಗ ದೃಶ್ಯಗಳಿರುವ ಮೆಮೊರಿ ಕಾರ್ಡ್ ಅನ್ನು ತೆರೆದು ಪರಿಶೀಲಿಸಲಾಗಿದೆ ಎಂದು ಹೇಳಿದೆ. ಅಂಗಮಾಲಿ ಮ್ಯಾಜಿಸ್ಟ್ರೇಟ್ ಲೀನಾ, ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಕ್ಲರ್ಕ್ ಮಹೇಶ್ ಮತ್ತು ವಿಚಾರಣಾ ನ್ಯಾಯಾಲಯದ ಶಿರಸ್ತೇದಾರ್ ತಾಜುದ್ದೀನ್ ಅವರು ಮೆಮೊರಿ ಕಾರ್ಡ್ ಪರಿಶೀಲಿಸಿದ್ದು ಪತ್ತೆಯಾಗಿತ್ತು.