ಕಾಸರಗೋಡು: ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂದು ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್.ಶಂಸೀರ್ ಹೇಳಿದರು.
ಕಾಞಂಗಾಡು ಸÀರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಕಾಞಂಗಾಡ್ ನಗರವನ್ನು ಕಲುಷಿತ ನಗರ ಪ್ರದೇಶಗಳಲ್ಲಿ ಆಯ್ಕೆ ಮಾಡಿದೆ. ವೊಕೇಶನಲ್ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸ್ವಚ್ಛಗೊಳಿಸಿ ಉದ್ಯಾನವನ್ನಾಗಿ ಪರಿವರ್ತಿಸುವ ಕಾರ್ಯವನ್ನು ಕಾಞಂಗಾಡು ನಗರಸಭೆಯ ಅಧ್ಯಕ್ಷರು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು. ಹೊಸ ಪೀಳಿಗೆಗೆ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಬಗ್ಗೆ ಕಲಿಸಬೇಕು ಮತ್ತು ಅದಕ್ಕೆ ತಕ್ಕಂತೆ ಬದುಕುವುದು ಹೇಗೆ ಎಂಬುದರ ಅರಿವಿರಬೇಕು ಎಂದರು.
ವಿದ್ಯಾರ್ಥಿಗಳಿಗೆ ಅಗತ್ಯವಾದ ಭೌತಿಕ ಪರಿಸ್ಥಿತಿಗಳನ್ನು ಒದಗಿಸಬೇಕು. ನಮ್ಮ ಹೊಸ ಪೀಳಿಗೆಯ ಮಕ್ಕಳು ಹೆಚ್ಚಿನ ಆತ್ಮ ವಿಶ್ವಾಸ ಮತ್ತು ಇಚ್ಛಾಶಕ್ತಿಯನ್ನು ಹೊಂದಿದ್ದಾರೆ ಮತ್ತು ಉತ್ತಮ ಲಕ್ಷ್ಯ ಹೊಂದಿದ್ದಾರೆ. ಪೋಷಕರು ಮಕ್ಕಳ ಆಸಕ್ತಿಯ ಕ್ಷೇತ್ರ ತಲುಪಲು ಮಾರ್ಗವನ್ನು ಸಿದ್ಧಪಡಿಸಬೇಕು. ಸ್ಪರ್ಧಾತ್ಮಕ ಜಗತ್ತನ್ನು ಪ್ರವೇಶಿಸಬೇಕಾದ ಮಕ್ಕಳಿಗೆ ಉತ್ತಮ ಸಂವಹನ ಕೌಶಲ್ಯಗಳ ಅಗತ್ಯವಿರುತ್ತದೆ ಮತ್ತು ಸಾಧ್ಯವಿರುವ ಎಲ್ಲಾ ಭಾಷೆಗಳನ್ನು ಕಲಿಯುವುದು ಪ್ರಯೋಜನಕಾರಿಯಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಎರಡನೇ ಪೋಷಕರಾಗಿದ್ದು, ಮಕ್ಕಳ ಚಾರಿತ್ರ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವತ್ತ ಶಿಕ್ಷಕರು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ತಮ ಬಾಂಧವ್ಯ ಹೊಂದಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಿತು ಅವರ ನ್ಯೂನತೆಗಳನ್ನು ಪರಿಹರಿಸಲು ಅವರ ಬೆಂಬಲಕ್ಕೆ ನಿಲ್ಲಬೇಕು. ಆಟವಾಡಲು, ನಗಲು, ಮೋಜು ಮಾಡಲು, ಕಲಿಯಲು ಮತ್ತು ಬೆಳೆಯಲು ಅಗತ್ಯವಾದ ಭೌತಿಕ ಪರಿಸ್ಥಿತಿಯನ್ನು ಸರ್ಕಾರ ಒದಗಿಸಿದ್ದು, ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಹೇಳಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ನಗರ ಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ವೈ. ಉಪಾಧ್ಯಕ್ಷ ಬಿಲ್ಟಕ್ ಅಬ್ದುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಲತಾ, ಕೆ.ಪ್ರಭಾವತಿ, ಕೆ.ಅನೀಶನ್, ಕೌನ್ಸಿಲರ್ ಸೆವೆನ್ ಅಬುಲ್ ರೆಹಿಮಾನ್, ವಿದ್ಯಾಕಿರಣ ಜಿಲ್ಲಾ ಸಂಯೋಜಕ ಎಂ. ಸುನಿಲ್ ಕುಮಾರ್, ಹೊಸದುರ್ಗ ಬಿ.ಪಿ.ಸಿ. ಕೆ.ವಿ.ರಾಜೇಶ್, ಸಾರ್ವಜನಿಕ ಕಾರ್ಯಕರ್ತರಾದ ಕೆ.ಪಿ. ಬಾಲಕೃಷ್ಣನ್, ಕೆ.ಕೆ.ವತ್ಸಲನ್, ಗಂಗಾದರನ್ ಕೋವಲ್, ಟಿ.ವಿ.ನಂದಕುಮಾರ್, ಪ್ರಮೋದ್ ಕರುವಾಲಂ, ಸನ್ನಿ ಅರಮನೆ, ಉದಿನೂರು ಸುಕುಮಾರನ್, ಪಿಟಿಎ ಅಧ್ಯಕ್ಷ ಕೆ.ವಿ. ಸುಧೀಶ, ಪ್ರಭಾರ ಪ್ರಾಂಶುಪಾಲ ಕೆ. ಹೇಮಾ ಮಾಲಿನಿ, ಎಸ್‍ಎಂಸಿ ಅಧ್ಯಕ್ಷ ಅಬ್ದುಲ್ ನಾಸಿರ್, ಮದರ್ ಪಿಟಿಎ ಅಧ್ಯಕ್ಷೆ ಪಿ.ಎಂ.ರಚನಾ, ಮದರ್ ಉಪಾಧ್ಯಕ್ಷೆ ಎಲ್ಸುಲೈಖಾ, ಜಾಗೃತ ಸಮಿತಿ ಅಧ್ಯಕ್ಷ ಎನ್.ಉಣ್ಣಿಕೃಷ್ಣನ್, ಸಿಬ್ಬಂದಿ ಕಾರ್ಯದರ್ಶಿ ಕೆ.ಪಿ. ರಂಜಿತ್ ಅವರು ಮಾತನಾಡಿದರು. ಘಟಕ ಸಮಿತಿ ಅಧ್ಯಕ್ಷ ವಿ.ವಿ.ರಮೇಶ ಸ್ವಾಗತಿಸಿ, ಮುಖ್ಯಶಿಕ್ಷಕ ಎಂ.ಎ.ಅಬ್ದುಲ್ ಬಶೀರ್ ವಂದಿಸಿದರು.