ಕಾಸರಗೋಡು: ನೀರಿನ ಕೊರತೆ, ಹೆಚ್ಚುವರಿ ನೀರಿನ ಲಭ್ಯತೆ ಹಾಗೂ ನೀರಿನ ಬೇಡಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ ಸಿದ್ಧಪಡಿಸಿರುವ ಜಲ ಬಜೆಟ್ ಭವಿಷ್ಯದಲ್ಲಿ ಜಲ ಭದ್ರತೆಯನ್ನು ಖಾತ್ರಿಪಡಿಸಲು ಸಾಧ್ಯವಾಗಲಿದೆ ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಹೇಳಿದರು. ಅವರು ವಿದ್ಯಾನಗರ ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ಜಲ ಬಜೆಟ್ ಪುಸ್ತಿಕೆ ಬಿಡುಗಡೆ ಮಾಡಿ ಮಾತನಾಡಿದರು.
ದೇಶದಲ್ಲೇ ಪ್ರಥಮ ಬಾರಿಗೆ ಕಾಸರಗೋಡು ಜಿಲ್ಲಾ ಪಂಚಾಯಿತಿ ನೀರಿನ ಬಜೆಟ್ ಸಿದ್ಧಪಡಿಸಿರುವುದು ಶ್ಲಾಘನೀಯ. ಮುಂದಿನ ಪೀಳಿಗೆ ನೀರಿನ ವಿಷಯದಲ್ಲಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ನೀರಿನ ಬಳಕೆ ಮತ್ತು ಲಭ್ಯತೆ ಬಗ್ಗೆ ಸಾಕ್ಷರರಾಗಬೇಕಾದ ಅಗತ್ಯವಿದೆ. ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ಅಧಿಕಾರ ಬಳಸಿಕೊಂಡು ಪ್ರಾಯೋಗಿಕವಾಗಿ ಜಲ ಬಜೆಟ್ ಜಾರಿಗೊಳಿಸಬೇಕು ತಿಳಿಸಿದರು.
ಜಿಲ್ಲೆಯಲ್ಲಿ ಒಂಬತ್ತು ನದಿಗಳಿದ್ದರೂ ಬೇಸಿಗೆಯಲ್ಲಿ ಅತಿ ಹೆಚ್ಚು ಕುಡಿಯುವ ನೀರಿನ ಕೊರತೆ ಎದುರಿಸಬೇಕಾಗುತ್ತಿರುವ ಬಗ್ಗೆ ಆತ್ಮಾವಲೋಕನ ನಡೆಸಬೇಕಾಗಿದೆ.
ಅಂತರ್ಜಲ ಬಳಕೆಗೆ ನಿಯಂತ್ರಣ ಹೇರುವ ಮೂಲಕ ಎಲ್ಲರಿಗೂ ಕುಡಿಯುವ ನೀರು ಲಭ್ಯವಾಘುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಅನಿವಾರ್ಯ ಎಂಬುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಅಂತರ್ಜಲ ಲಭ್ಯತೆಯಲ್ಲಿ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಪರಿಣಾಮಕಾರಿ ಮತ್ತು ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಜಲಸಂರಕ್ಷಣಾ ಚಟುವಟಿಕೆಗಳನ್ನು ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ನೀರಿನ ಬಜೆಟ್ ಸಿದ್ಧಪಡಿಸಿದೆ. ಜಲಭದ್ರತಾ ಯೋಜನೆಯ ಮೊದಲ ಹಂತವಾಗಿ ನೀರಿನ ಕರಡು ಬಜೆಟ್ ಸಿದ್ಧಪಡಿಸಲಾಗಿದೆ. ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಜ್ ಪಾದೂರು, ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಜಾಸ್ಮಿನ್ ಕಬೀರ್. ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ಸಿಪಿಸಿಆರ್‍ಐ ವಿಜ್ಞಾನಿ ಡಾ.ಸಿ ತಂಬಾನ್, ಜಾಸ್ಮಿನ್ ಕಬೀರ್, ಸಿಪಿಸಿಆರ್‍ಐ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ಮನೋಜ್‍ಕುಮಾರ್, ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಲಾಲಿ ಜಾರ್ಜ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಪಿ.ಕೆ.ಸಜೀವ್ ವಂದಿಸಿದರು.