ನವದೆಹಲಿ (PTI): ಸೈಬರ್ ಸುರಕ್ಷತಾ ಸಂಸ್ಥೆಯಾದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಸ್ಪಂದನಾ ತಂಡವು (ಸಿಇಆರ್‌ಟಿ-ಇನ್)
ಸೈಬರ್ ವಂಚನೆಯ ಹತ್ತಕ್ಕೂ ಹೆಚ್ಚು ವಿಧಾನಗಳ ಕುರಿತ ಮಾಹಿತಿಯನ್ನು ಹಂಚಿಕೊಂಡಿದೆ.
ಡಿಜಿಟಲ್ ಅರೆಸ್ಟ್ ಸೇರಿ ವಿವಿಧ ರೀತಿಯ ವಂಚನೆಗಳ ಮೂಲಕ ಜನರ ಹಣ ಮತ್ತು ಖಾಸಗಿ ಮಾಹಿತಿಯನ್ನು ಹೇಗೆ ಕದಿಯಲಾಗುತ್ತದೆ ಎಂಬುದನ್ನು ವಿವರಿಸಲಾಗಿದೆ.
ಜನರು ಯಾವ ರೀತಿಯ ಎಚ್ಚರಿಕೆ ವಹಿಸಬೇಕು ಎಂಬುದನ್ನೂ ತಿಳಿಸಲಾಗಿದೆ.
ಯಾವ ಯಾವ ರೀತಿ ವಂಚನೆ?
l ಡಿಜಿಟಲ್ ಅರೆಸ್ಟ್: ವಂಚಕರು ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಸುಂಕಾಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತರಿಗೆ ದೂರವಾಣಿ ಕರೆ ಮಾಡುತ್ತಾರೆ. ಆನಂತರ, 'ನೀವು ನಿಷೇಧಿತ ವಸ್ತುವನ್ನು ಆಮದು ಮಾಡಿಕೊಂಡಿದ್ದೀರಿ/ ಭಯೋತ್ಪಾದಕ ಕೃತ್ಯಗಳಿಗೆ ನಿಮ್ಮ ಮೊಬೈಲ್ ಬಳಕೆಯಾಗಿದೆ/ ದೊಡ್ಡ ಮಟ್ಟದ ಹಣಕಾಸು ವಂಚನೆ ಎಸಗಿದ್ದೀರಿ' ಎಂದು ಆರೋಪಿಸುತ್ತಾರೆ.
1 ನೀವು ತಕ್ಷಣಕ್ಕೇ ನಮ್ಮ ವಿಡಿಯೊ ಕಣ್ಗಾವಲಿಗೆ ಬರಬೇಕು ಎಂದು ವಾಟ್ಸ್‌ಆಯಪ್ ಅಥವಾ ಸ್ಕೈಪ್ ವಿಡಿಯೊಕಾಲ್ ಮಾಡುತ್ತಾರೆ. ಸಂತ್ರಸ್ತರು ಅತ್ತಿತ್ತ ಓಡಾಡದಂತೆ ಮಾಡಿ, ಗಾಬರಿ ಹುಟ್ಟಿಸುತ್ತಾರೆ. ಇದರಿಂದ ನಿಮ್ಮನ್ನು ಬಿಡಬೇಕು ಎಂದರೆ ಹಣ ನೀಡಿ ಎಂದು ದೋಚುತ್ತಾರೆ. ಇದೇ ಡಿಜಿಟಲ್ ಅರೆಸ್ಟ್.
lಲಾಟರಿ ಮತ್ತು ಬಹುಮಾನ ವಂಚನೆ: ದೊಡ್ಡ ಮೊತ್ತದ ಹಣ ಗೆದ್ದಿರುವ ಸಂದೇಶವನ್ನು ಕಳುಹಿಸಲಾಗುತ್ತದೆ. ಅದರ ಪ್ರಕ್ರಿಯೆ ಪೂರ್ಣಗೊಳಿಸಲು ಅಥವಾ ತೆರಿಗೆಯ ರೂಪದಲ್ಲಿ ಒಂದಷ್ಟು ಹಣ ಪಾವತಿಸಬೇಕು ಎಂಬ ಬೇಡಿಕೆ ಇಡುತ್ತಾರೆ.
lಆನ್‌ಲೈನ್ ಡೇಟಿಂಗ್ ಆಯಪ್‌ಗಳ ಮೂಲಕ ಪರಿಚಯಿಸಿಕೊಂಡು ಭಾವನಾತ್ಮಕವಾಗಿ ಕಟ್ಟಿಹಾಕಿ, ವೈದ್ಯಕೀಯ ಚಿಕಿತ್ಸೆ ಮತ್ತಿತರ ನೆಪಗಳನ್ನು ಮುಂದಿಟ್ಟುಕೊಂಡು ಹಣ ಪಡೆದು ವಂಚಿಸುತ್ತಾರೆ.
lಉದ್ಯೋಗ ವಂಚನೆ: ಉದ್ಯೋಗ ಒದಗಿಸುವ ನೆಪದಲ್ಲಿ ಹಣಕ್ಕೆ ಬೇಡಿಕೆ ಇಡುತ್ತಾರೆ.
lಟೆಕ್ ಸಪೋರ್ಟ್ ವಂಚನೆ: ತಂತ್ರಜ್ಞಾನ ಕುರಿತ ಬಳಕೆದಾರರ ಸೀಮಿತ ಜ್ಞಾನವನ್ನೇ ಬಂಡವಾಳವಾಗಿ ಮಾಡಿಕೊಂಡು, ಸಂತ್ರಸ್ತರ ಕಂಪ್ಯೂಟರ್‌ನ ಪಾಸ್‌ವರ್ಡ್ ಪಡೆದು ವೈಯಕ್ತಿಕ ಮತ್ತು ಗೋಪ್ಯ ಮಾಹಿತಿಯನ್ನು ಕದಿಯುತ್ತಾರೆ.
lನಕಲಿ ಮನವಿ ಮೂಲಕ ವಂಚನೆ: ನಕಲಿ ವೆಬ್‌ಸೈಟ್ ಅಥವಾ ಸಾಮಾಜಿಕ ಜಾಲತಾಣ ಖಾತೆ ತೆರೆದು ವಿಪತ್ತು ಪರಿಹಾರ, ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ಕಾಗಿ ದೇಣಿಗೆ ನೀಡುವಂತೆ ಮನವಿ ಮಾಡುತ್ತಾರೆ.
lವಂಚಕರು ಇ-ಮೇಲ್ ಅಥವಾ ಜಾಲತಾಣಗಳ ಮೂಲಕ ಸಂಪರ್ಕಿಸಿ, ತಪ್ಪಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆ. ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಬೇಕೆಂದಿದ್ದರೆ ಕೂಡಲೇ ಹಣ ವರ್ಗಾಯಿಸಿ ಎಂದು ಕೇಳುತ್ತಾರೆ.
lಬಂಡವಾಳ ವಂಚನೆ: ಅಲ್ಪ ಬಂಡವಾಳದಿಂದ ಶೀಘ್ರ ಹಣ ಮಾಡಬಹುದು ಎಂಬ ಆಸೆ ಹುಟ್ಟಿಸಿ, ಹಂತ ಹಂತವಾಗಿ ಹಣ ಕಸಿದುಕೊಂಡು ವಂಚನೆ ಮಾಡುತ್ತಾರೆ.
lಕ್ಯಾಶ್ ಆನ್ ಡೆಲಿವರಿ ವಂಚನೆ: ನಕಲಿ ಆನ್‌ಲೈನ್ ಸ್ಟೋರ್ ಸೃಷ್ಟಿಸಿ 'ಕ್ಯಾಶ್ ಆನ್ ಡೆಲಿವರಿ' ಆಯ್ಕೆ ನೀಡುತ್ತಾರೆ. ಆದರೆ ವಿಳಾಸಕ್ಕೆ ತಲುಪಿದ ವಸ್ತುವು ನಕಲಿಯಾಗಿರುತ್ತದೆ ಅಥವಾ ಆರ್ಡರ್ ಮಾಡಿದ್ದಕ್ಕಿಂತ ಕಳಪೆಯಾಗಿರುತ್ತದೆ.
lಫೋನ್ ವಂಚನೆ: ಟೆಲಿಕಾಂ ನಿಯಂತ್ರಣ ಸಂಸ್ಥೆ ಹೆಸರಿನಲ್ಲಿ ಸಂತ್ರಸ್ತರಿಗೆ ಕರೆ ಮಾಡಿ, 'ಸೇವೆಯಲ್ಲಿ ಸಮಸ್ಯೆ ತಲೆದೋರಿದೆ. ಅದಕ್ಕಾಗಿ ಗುರುತು ಪರಿಶೀಲನೆಗಾಗಿ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಮತ್ತು ಬ್ಯಾಂಕ್ ಮಾಹಿತಿ ಹಂಚಿಕೊಳ್ಳಿ' ಎಂದು ಕೇಳುತ್ತಾರೆ.
lಪಾರ್ಸೆಲ್ ವಂಚನೆ: ವಂಚಕರು ದೂರವಾಣಿ ಅಥವಾ ಮೆಸೇಜ್ ಮೂಲಕ ಸಂಪರ್ಕಿಸಿ, 'ಡ್ರಗ್ಸ್ ತುಂಬಿದ್ದ ಬ್ಯಾಗನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕಾಗಿ ದಂಡ ಪಾವತಿಸದಿದ್ದಲ್ಲಿ ನಿಮ್ಮನ್ನು ಬಂಧಿಸುತ್ತೇವೆ ಅಥವಾ ಕಾನೂನು ಕ್ರಮ ಕೈಗೊಳ್ಳುತ್ತೇವೆ' ಎಂದು ಬೆದರಿಕೆ ಒಡ್ಡುತ್ತಾರೆ.
lಸಾಲ ಅಥವಾ ಕಾರ್ಡ್ ವಂಚನೆ: ಕರೆ ಮಾಡಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ತಿಳಿಸುತ್ತಾರೆ. ನಂತರ ಪ್ರಕ್ರಿಯೆ ಪೂರ್ಣಗೊಳಿಸಲು ಶುಲ್ಕ ಪಾವತಿಸುವಂತೆ ಬೇಡಿಕೆ ಇಡುತ್ತಾರೆ.
ಮಾರ್ಗಸೂಚಿಯಲ್ಲಿ ಹೇಳಿದ್ದೇನು?
l ಸರ್ಕಾರಿ ಸಂಸ್ಥೆಗಳು ಸಂವಹನಕ್ಕಾಗಿ ವಾಟ್ಸ್‌ಆಯಪ್ ಅಥವಾ ಸ್ಕೈಪ್‌ನಂತಹ ವೇದಿಕೆಗಳನ್ನು ಬಳಕೆ ಮಾಡುವುದಿಲ್ಲ
l ಕರೆ ಮಾಡಿ ಹಣ ಅಕ್ರಮ ವರ್ಗಾವಣೆ, ಡ್ರಗ್ ಕಳ್ಳಸಾಗಣೆ ಯಂತಹ ಆರೋಪ ಮಾಡಿದ ಸಂದರ್ಭದಲ್ಲಿ ಆತಂಕ ಗೊಳ್ಳಬೇಡಿ. ನಿಮ್ಮ ಭಯ ಮತ್ತು ಆತುರವನ್ನೇ ವಂಚಕರು ಬಂಡವಾಳವಾಗಿ ಬಳಸಿಕೊಳ್ಳುತ್ತಾರೆ
l ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ವೈಯಕ್ತಿಕ ಮಾಹಿತಿ, ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳಬೇಡಿ
l ವಂಚಕರಿಗೆ ಪ್ರತಿಕ್ರಿಯಿಸುವ ಮುನ್ನ ತಾಳ್ಮೆಯಿಂದ ಯೋಚಿಸಿ. ಒತ್ತಡದಲ್ಲಿದ್ದಾಗ ಹಣ ವರ್ಗಾವಣೆ ಮಾಡಬೇಡಿ
lತನಿಖಾ ಸಂಸ್ಥೆಗಳು ತಕ್ಷಣ ಹಣ ವರ್ಗಾವಣೆ ಮಾಡುವಂತೆ ಎಂದಿಗೂ ಒತ್ತಡ ಹೇರುವುದಿಲ್ಲ
lಫೋನ್ ಅಥವಾ ಅನ್‌ಲೈನ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಬಹುತೇಕ ಅದು ಆನ್‌ಲೈನ್ ವಂಚನೆಯೇ ಆಗಿರುತ್ತದೆ
lಆನ್‌ಲೈನ್ ವಂಚನೆಯ ಅನುಮಾನ ಬಂದರೆ, ಸಂಬಂಧಿತ ಸಂಸ್ಥೆಗಳನ್ನು ಸಂಪರ್ಕಿಸಿ ಪರಿಶೀಲಿಸಿ
l ಎಚ್ಚರಿಕೆಯಿಂದ ಇರುವುದು ಆನ್‌ಲೈನ್ ವಂಚನೆಯಿಂದ ಪಾರಾಗುವ ಪ್ರಮುಖ 'ಅಸ್ತ್ರ'
ಜಾಗೃತಿಯೇ ರಕ್ಷಣೆಯ ದಾರಿ: ಪ್ರಧಾನಿ ನರೇಂದ್ರ ಮೋದಿ
'ಡಿಜಿಟಲ್ ಬಂಧನ'ದ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳಿಂದ ಸಮಾಜದ ಎಲ್ಲ ವರ್ಗದ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂತಹ ವಂಚನೆಯ ಪ್ರಯತ್ನಗಳು ನಡೆದಾಗ 'ನಿಲ್ಲಿ, ಯೋಚಿಸಿ ಮತ್ತು ಕ್ರಮ ಕೈಗೊಳ್ಳಿ' ಎಂಬ ನೀತಿಯನ್ನು ಅನುಸರಿಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ. .
'ಡಿಜಿಟಲ್ ಬಂಧನ'ದ ಹೆಸರಿನಲ್ಲಿ ನಡೆಯುವ ವಂಚನೆಯನ್ನು ತಡೆಯಲು ಎಲ್ಲ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರದ ಜತೆಗೂಡಿ ಕೆಲಸ ಮಾಡುತ್ತಿವೆ. ಈ ಅಪರಾಧಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ' ಎಂದಿದ್ದಾರೆ.
ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದ ಬಳಿಕ ತನಿಖಾ ಸಂಸ್ಥೆಗಳ ಸೋಗಿನಲ್ಲಿ ಯಾವ ರೀತಿಯಾಗಿ ವಂಚನೆ ಮಾಡುತ್ತಾರೆ ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
ಕರೆ ಮಾಡಿ: ಬಂಧನದ ಹೆಸರಿನಲ್ಲಿ ಕರೆ ಮಾಡಿದರೆ, ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ, ದೂರು ನೀಡಿ. ವೆಬ್‌ಸೈಟ್ ಮೂಲಕ ದೂರು ದಾಖಲಿಸಿ, ನಂತರ ಹತ್ತಿರದ ಪೊಲೀಸರಿಗೆ ಈ ಕುರಿತು ದೂರು ನೀಡಬೇಕು ಎಂದು ತಿಳಿಸಿದ್ದಾರೆ.
'ಕರೆ ಮಾಡಿದ ವ್ಯಕ್ತಿಯ ಜತೆ ನಡೆಸಿದ ಸಂವಹನವನ್ನು ರೆಕಾರ್ಡ್ ಮಾಡುವ ಜತೆಗೆ ಸ್ಕ್ರೀನ್‌ಶಾಟ್ ತೆಗೆದಿಟ್ಟುಕೊಳ್ಳಬೇಕು' ಎಂದಿದ್ದಾರೆ.