ಗಾಜಾಪಟ್ಟಿ: ಉತ್ತರ ಗಾಜಾದಲ್ಲಿ ಕಾರ್ಯಾಚರಿಸುತ್ತಿರುವ ಏಕೈಕ ಆಸ್ಪತ್ರೆಯಲ್ಲಿರುವ ರೋಗಿಗಳು ಹಾಗೂ ಸಿಬ್ಬಂದಿಯನ್ನು ಇಸ್ರೇಲ್ ಪಡೆಗಳು ವಶಕ್ಕೆ ಪಡೆದಿವೆ ಎಂದು ಗಾಜಾ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
'ಜಬಾಲಿಯಾ ನಗರದ ಕಮಲ್ ಅದ್ವಾನ್ ಆಸ್ಪತ್ರೆಯೊಳಗೆ ಇಸ್ರೇಲ್ ಪಡೆಗಳು ನುಗ್ಗಿವೆ' ಎಂದು ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.
'ಆಸ್ಪತ್ರೆಯಲ್ಲಿದ್ದ ನೂರಾರು ರೋಗಿಗಳು, ಸಿಬ್ಬಂದಿ ಹಾಗೂ ಸತತ ಬಾಂಬ್ ದಾಳಿಯಿಂದ ನಿರಾಶ್ರಿತರಾಗಿ ಆಸ್ಪತ್ರೆಯಲ್ಲಿ ಆಶ್ರಯ ಪಡೆಯುತ್ತಿದ್ದವರನ್ನು ಅವರು ವಶಕ್ಕೆ ಪಡೆದಿದ್ದಾರೆ' ಎಂದು ಅದು ಹೇಳಿದೆ.
' ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆಹಾರ, ಔಷಧ ಅಥವಾ ಇನ್ಯಾವುದೇ ಅಗತ್ಯ ವಸ್ತುಗಳು ಸಿಗುತ್ತಿಲ್ಲ. ಅಲ್ಲಿ ದುರಂತಮಯ ಪರಿಸ್ಥಿತಿ ಇದೆ' ಎಂದು ಸಚಿವಾಲಯ ಹೇಳಿದೆ.
ಆಸ್ಪತ್ರೆಯ ಮೇಲಿನ ದಾಳಿ 'ಯುದ್ಧಾಪರಾಧ ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆ' ಎಂದು ಹಮಾಸ್ ಕಿಡಿಕಾರಿದೆ.
'ಜಬಾಲಿಯ ನಿರಾಶ್ರಿತ ಕೇಂದ್ರದಲ್ಲಿರುವ ಆಸ್ಪತ್ರೆಗೆ ಪ್ರವೇಶಕ್ಕೂ ಮುನ್ನ ಆವರಣವನ್ನು ಇಸ್ರೇಲ್ ಪಡೆಗಳು ಸುತ್ತುವರಿದಿದ್ದವು' ಎಂದು ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿ ತಿಳಿಸಿದೆ.
'ಉತ್ತರ ಗಾಜಾ ಪಟ್ಟಿಯ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿರುವ ಕಮಾಲ್ ಅದ್ವಾನ್ ಅಸ್ಪತ್ರೆಗೆ ಇಸ್ರೇಲ್ ಪಡೆಗಳು ನುಗ್ಗಿ, 150ಕ್ಕೂ ಅಧಿಕ ರೋಗಿಗಳನ್ನು ಹಾಗೂ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ' ಎಂದು ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮಹ್ಮೂದ್ ಬಾಸಲ್ ತಿಳಿಸಿದ್ದಾರೆ.
'ಭಯೋತ್ಪಾದಕರು ಹಾಗೂ ಭಯೋತ್ಪಾದಕ ಸೌಕರ್ಯಗಳು ಇರುವ ಗುಪ್ತಚರ ಮಾಹಿತಿ ಬಂದಿದ್ದು, ನಾವು ಜಬಾಲಿಯಾದ ಕಮಲ್ ಅದ್ವಾನ್ ಆಸ್ಪತ್ರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ' ಎಂದು ಇಸ್ರೇಲ್ ಸೇನೆ ಹಾಗೂ ಇಸ್ರೇಲ್ ಭದ್ರತಾ ಏಜೆನ್ಸಿ ತಿಳಿಸಿದೆ.