ಪ್ರಯಾಗರಾಜ್: ಸನಾತನೇತರರಿಗೆ ಕುಂಭ ಮೇಳದಲ್ಲಿ ಆಹಾರ ಮಳಿಗೆಗಳನ್ನು ಹಾಕಲು ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ಅಖಿಲ ಭಾರತ ಅಖಾಡ ಪರಿಷತ್ ಬುಧವಾರ ತಿಳಿಸಿದೆ.
ಅಲ್ಲದೇ ಉರ್ದು ಪದಗಳಾದ 'ಶಾಹಿ ಸ್ನಾನ'ವನ್ನು 'ರಾಜ್ಸಿ ಸ್ನಾನ' ಎಂದು, 'ಪೇಶ್ವಾಯಿ' ಅನ್ನು 'ಚಾವ್ನಿ ಪ್ರವೇಶ್' ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ.
ದೀಪಾವಳಿಯ ನಂತರ ಆಹಾರ ಮಳಿಗೆ ಮಾನದಂಡಗಳ ಬಗ್ಗೆ ನಿರ್ಣಯವನ್ನು ಅಂಗೀಕರಿಸಿ ಅನುಮೋದನೆಗಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಪರಿಷತ್ ತಿಳಿಸಿದೆ.
ಕುಂಭ ಮೇಳ ನಡೆಯುವ ಪ್ರದೇಶದಲ್ಲಿ ನಿಯೋಜನೆಗೊಳ್ಳುವ ಪೊಲೀಸರು ಮತ್ತು ಅಧಿಕಾರಿಗಳು ಸನಾನಿತಗಳು ಆಗಿರಬೇಕು ಎಂದು ಪರಿಷತ್ ಬಯಸುತ್ತದೆ. ಇದರಿಂದ ಮೇಳದ ಪಾವಿತ್ರ್ಯತೆ ಕಾಪಾಡಿದಂತಾಗುತ್ತದೆ ಎಂದಿದೆ.
'ಇತ್ತೀಚೆಗೆ ಪ್ರಯಾಗರಾಜ್‌ನ ನಿರಂಜನಿ ಅಖಾಡದಲ್ಲಿ ನಡೆದ ಸಭೆಯಲ್ಲಿ ಹೆಸರು ಬದಲಾವಣೆ ಮಾಡುವ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಶೀಘ್ರದಲ್ಲೆ ಅವರು ಈ ಕುರಿತು ಔಪಚಾರಿಕವಾಗಿ ಘೋಷಣೆ ಮಾಡಲಿದ್ದಾರೆ' ಎಂದು ಪರಿಷತ್‌ನ ಮುಖ್ಯಸ್ಥ ರವೀಂದ್ರ ಪುರಿ ಪಿಟಿಐಗೆ ತಿಳಿಸಿದರು.
'ಇತ್ತೀಚೆಗೆ ಜ್ಯೂಸ್‌ನಲ್ಲಿ ಮೂತ್ರ ಬೆರೆಸುವುದು, ಆಹಾರ ಪದಾರ್ಥಗಳಿಗೆ ಉಗುಳುವುದು ಸೇರಿ ಹಲವು ಘಟನೆಗಳು ಬೆಳಕಿಗೆ ಬಂದಿದೆ. ಕುಂಭಮೇಳದಲ್ಲಿ ಎಲ್ಲಾ ಸನಾತನಿಗಳು ಹಿಂದೂಗಳಾಗಿರುತ್ತಾರೆ. ಆದ್ದರಿಂದ ಯಾರಾದರೂ ವಸ್ತುಗಳನ್ನು ಅಪವಿತ್ರಗೊಳಿಸಿ ಅವುಗಳನ್ನು ತಿನ್ನಿಸಿದರೆ ಸಹಿಸಲಾಗುವುದಿಲ್ಲ' ಎಂದರು.
ಏತನ್ಮಧ್ಯೆ, ಮದ್ಯ ಮತ್ತು ಮಾಂಸ ಸೇವಿಸದ ಪೊಲೀಸರನ್ನು ಕುಂಭ ಮೇಳಕ್ಕೆ ನಿಯೋಜಿಸಲು ಪಾಲಿಕೆ ನಿರ್ಧರಿಸಿದೆ.