ಇಂಫಾಲ್: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಇದೇ ಮೊದಲ ಬಾರಿಗೆ ಮೈತೇಯಿ, ಕುಕಿ ಮತ್ತು ನಾಗಾ ಸಮುದಾಯಕ್ಕೆ ಸೇರಿದ ಶಾಸಕರು ನಾಳೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಸಭೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗಾ ಸಮುದಾಯಕ್ಕೆ ಸೇರಿದ ಮೂವರು ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದು, ಮೈತೇಯಿ ಮತ್ತು ಕುಕಿ ಸಮುದಾಯಗಳ ಎಷ್ಟು ಮಂದಿ ಶಾಸಕರು ಭಾಗವಹಿಸುತ್ತಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಘರ್ಷದಲ್ಲಿ ತೊಡಗಿರುವ ಮಣಿಪುರದ ಸಮುದಾಯಗಳ ನಡುವೆ ಮಾತುಕತೆ ನಡೆಸಿ, ಸಂಘರ್ಷ ಅಂತ್ಯಕ್ಕೆ ಪರಿಹಾರ ಕಂಡುಹಿಡಿಯುವ ಕೇಂದ್ರದ ಪ್ರಯತ್ನದ ಫಲವಾಗಿ ಈ ಸಭೆ ನಡೆಯುತ್ತಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
2023ರ ಮೇ ತಿಂಗಳಿನಲ್ಲಿ ಸಂಘರ್ಷ ಭುಗಿಲೆದ್ದ ಬಳಿಕ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ.
ಸಭೆಯಲ್ಲಿ ಭಾಗವಹಿಸಲಿರುವ ಮೂವರೂ ನಾಗಾ ಶಾಸಕರು ನಾಗಾ ಪೀಪಲ್ಸ್ ಫ್ರಂಟ್‌ಗೆ(ಎನ್‌ಪಿಎಫ್) ಸೇರಿದವರು. ಎನ್‌ಪಿಎಫ್ ಆಡಳಿತಾರೂಢ ಬಿಜೆಪಿಯ ಮಿತ್ರ ಪಕ್ಷವಾಗಿದೆ. ಬಿಜೆಪಿಯ ಹಲವು ಶಾಸಕರು ಸಹ ವಿವಿಧ ವಿಮಾನಗಳಲ್ಲಿ ದೆಹಲಿಗೆ ತೆರಳಿದ್ದಾರೆ.
'ಕೆಲ ವಿಷಯಗಳ ಕುರಿತಂತೆ ಚರ್ಚೆ ನಡೆಸಲು ದೆಹಲಿಗೆ ಬರುವಂತೆ ನಮಗೆ ಆಹ್ವಾನ ನೀಡಲಾಗಿತ್ತು. ಸಭೆಯ ಅಜೆಂಡಾ ಬಗ್ಗೆ ನಮಗೆ ಸ್ಪಷ್ಟವಾಗಿ ತಿಳಿದಿಲ್ಲ. ಮಣಿಪುರದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ'ಎಂದು ಜಲಸಂಪನ್ಮೂಲ ಸಚಿವ ಅವಾಂಗ್‌ಬೌ ನ್ಯೂಮೈ ತಿಳಿಸಿದ್ದಾರೆ.
ಎಲ್ಲ ಸಮುದಾಯಗಳ ಜನರು ಒಗ್ಗೂಡದಿದ್ದರೆ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಕಷ್ಟ ಎಂದು ಎನ್‌ಪಿಎಫ್ ಶಾಸಕ ಎಲ್. ದಿಖೋ ಹೇಳಿದ್ದಾರೆ.
'ಸಭೆ ನಡೆಸುವ ಗೃಹ ಸಚಿವಾಲಯದ ಪ್ರಯತ್ನ ಒಳ್ಳೆಯ ಸೂಚನೆ. ನನಗೆ ಶಾಂತಿ ನೆಲೆಸುವ ಭರವಸೆ ಇದೆ. ನಾನು ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ'ಎಂದೂ ಹೇಳಿದ್ದಾರೆ.
ಶಾಂತಿ ನೆಲೆಸುವ ದೃಷ್ಟಿಯಿಂದ ಮಾಡುವ ಯಾವುದೇ ಪ್ರಯತ್ನ ಒಳ್ಳೆಯದೇ. ಆದರೆ, ಸಭೆಗೆ ವಿರೋಧ ಪಕ್ಷವನ್ನು ಆಹ್ವಾನಿಸಿಲ್ಲ ಎಂದು ಮಣಿಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಮೇಘಚಂದ್ರ ಹೇಳಿದ್ದಾರೆ.
ವಿಧಾನಸಭೆ ಸ್ಪೀಕರ್ ಟಿ. ಸತ್ಯವ್ರತ ಭಾನುವಾರವೇ ದೆಹಲಿಗೆ ತೆರಳಿದ್ದಾರೆ.
ಸಭೆಯ ಕಾರ್ಯಸೂಚಿಯ ಬಗ್ಗೆ ಸಮುದಾಯದೊಳಗೆ ಸಮಾಲೋಚನೆಗಳು ನಡೆಯಬೇಕಿತ್ತು ಎಂದು ಮಣಿಪುರದ ಕುಕಿ-ಝೋ ಬುಡಕಟ್ಟು ಸಮುದಾಯಗಳ ಮುಂಚೂಣಿ ಸಂಘಟನೆಯಾದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಹೇಳಿದೆ.
ಶಾಸಕರ ಸಭೆಯ ಬಗ್ಗೆ ಯಾವುದೇ ನಾಗರಿಕ ಸಮಾಜ ಸಂಘಟನೆಗಳಿಗೆ ಮಾಹಿತಿ ನೀಡಿಲ್ಲ, ಅಂತಹ ಮಹತ್ವದ ಸಭೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿತ್ತು ಎಂದಿದೆ.