ಕಾಸರಗೋಡು: ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಹೆಚ್ಚು ಫಲಾನುಭವಿಗಳಿಗೆ ಲಭ್ಯವಾಗುವಂತೆ ಮಾಡುವ ಮೂಲಕ ಸಂಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸಲಾಗುವುದಾಗಿ ಶಾಸಕ ಇ. ಚಂದ್ರಶೇಖರನ್ ಹೇಳಿದರು. ಅವರು ಪರಪ್ಪ ಬ್ಲಾಕ್ ಪಂಚಾಯಿತಿಯ ಮಹತ್ವಾಕಾಂಕ್ಷಿ ಕಾರ್ಯಕ್ರಮ ಸಂಪೂರ್ಣತಾ ಅಭಿಯಾನದ ಘೋಷಣೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯೋಜನೆಗಳ ಯಶಸ್ವೀ ಜಾರಿಗಾಗಿ ನೇತೃತ್ವ ವಹಿಸಿದ್ದ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಹಾಗೂ ಇತರೆ ಜಾರಿ ಅಧಿಕಾರಿಗಳನ್ನು ಶಾಸಕ ಚಂದ್ರಶೇಖರನ್ ಅಭಿನಂದಿಸಿದರು.
ಪರಪ್ಪ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ. ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ವಿಶೇಷ ಆಹ್ವಾನಿತರಾಗಿದ್ದರು. ಅಪರ ಜಿಲ್ಲಾಧಿಕಾರಿ ಪ್ರದಿಕ್ ಜೈನ್, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ. ಭೂಪೇಶ್, ಪರಪ್ಪ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ವಿವಿಧ ಇಲಾಖೆಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಮೊದಲಾದವರು ಭಾಗವಹಿಸಿದ್ದರು.
ಪಿ. ಎಂ. ಎವೈ (ಜಿ) ಪೂರ್ಣಗೊಂಡ ಮನೆಗಳ ಹಸ್ತಾಂತರ ಮತ್ತು ಹೊಸ ಮನೆಗಳ ಮೊದಲ ಕಂತಿನ ವಿತರಣೆಯನ್ನು ಶಾಸಕರು ನಿರ್ವಹಿಸಿದರು. ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸನ್ಮಾನಿಸಿದರು. ಈ ಸಂದರ್ಭ ಹೈನುಗಾರರಿಗಿರುವ ಸಹಾಯಧನ ವಿತರಿಸಲಾಯಿತು. ಪ್ರಮುಖ ಸೂಚಕಗಳಾದ ಎಎನ್‍ಸಿ ನೋಂದಣಿ, ಜೀವನಶೈಲಿ ರೋಗಗಳ ನಿರ್ಣಯ, ಗರ್ಭಿಣಿಯರಿಗೆ ಪೌಷ್ಟಿಕಾಂಶದ ವಿತರಣೆ ಮತ್ತು ಕುಟುಂಬಶ್ರೀ ನೆರೆಹೊರೆ ಗುಂಪುಗಳಿಗೆ ಆವರ್ತ ನಿಧಿಗಳ ವಿತರಣೆ ಶೇ.100ಯಶಸ್ಸು ಸಾಧಿಸುವ ನಿಟ್ಟನಲ್ಲಿ ನೀತಿ ಆಯೋಗ್ ರೂಪಿಸಿದ ಯೋಜನೆ ಇದಾಗಿದೆ. ಜಿಲ್ಲಾ ಯೋಜನಾಧಿಕಾರಿ ಟಿ. ರಾಜೇಶ್ ಸ್ವಾಗತಿಸಿದರು. ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಜೋಸೆಫ್ ಎಂ ಚಾಕೋ ವಂದಿಸಿದರು.