ಗುವಾಹಟಿ: ದುರ್ಗಾಪೂಜೆಗೆ ದೇಣಿಗೆ ನೀಡುವ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಭಾನುವಾರ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಉತ್ತರ ತ್ರಿಪುರಾ ಜಿಲ್ಲೆಯ ಕದಾಮತಲ್ ಗ್ರಾಮದಲ್ಲಿ ಸಂಘರ್ಷ ಉಂಟಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಆಕ್ರೋಶಗೊಂಡ ಜನರು ಅಂಗಡಿ ಹಾಗೂ ಮನೆಗಳಿಗೆ ಬೆಂಕಿ ಹಚ್ಚಲು ಮುಂದಾದರು.
'ಸಾವಿನ ನಿಖರ ಕಾರಣ ತಿಳಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
'ದುರ್ಗಾ ಪೂಜೆ ನಡೆಸಲು ದೇಣಿಗೆ ನೀಡುವಂತೆ ಒಂದು ಗುಂಪು ಬೇಡಿಕೆ ಇಟ್ಟಿತ್ತು. ಇದಕ್ಕೆ ಕೆಲವರು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಎರಡು ಧರ್ಮಕ್ಕೆ ಸೇರಿದ ಗುಂಪುಗಳು ಹಲವು ಮನೆಗಳು, ಅಂಗಡಿಗೆ ಬೆಂಕಿ ಹಚ್ಚಲು ಆರಂಭಿಸಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು' ಎಂದು ಮೂಲಗಳು ತಿಳಿಸಿವೆ.
'ಘಟನೆ ಬಳಿಕ ಐದು ಮಂದಿ ಗುಂಪು ಸೇರದಂತೆ ಜಿಲ್ಲೆಯಲ್ಲಿ ನಿಯಂತ್ರಣ ಹೇರಲಾಗಿದ್ದು, ಪರಿಸ್ಥಿತಿ ಸುಧಾರಿಸುವವರೆಗೂ ಈ ನಿಯಂತ್ರಣ ಮುಂದುವರಿಯಲಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.