ಬೈರೂತ್ : ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ನೂತನ ಮುಖ್ಯಸ್ಥ ಶೇಖ್ ನಯಮ್ ಕ್ವಾಸೆಮ್ ಅವರು, ಸಯ್ಯದ್ ಹಸನ್ ನಸ್ರಲ್ಲಾ ಅವರ ಕಾರ್ಯಸೂಚಿಯನ್ನು ಮುಂದುವರಿಸುವುದಾಗಿ ಇಂದು (ಬುಧವಾರ) ಹೇಳಿದ್ದಾರೆ.
ಹಿಜ್ಬುಲ್ಲಾ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ (64) ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಸೆಪ್ಟೆಂಬರ್ 28ರಂದು ಖಚಿತಪಡಿಸಿತ್ತು.
ಹತ್ಯೆ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದ ಸೇನೆ, 'ಹಸನ್ ನಸ್ರಲ್ಲಾ ಇನ್ನು ಮುಂದೆ ಉಗ್ರವಾದದ ಮೂಲಕ ಜಗತ್ತನ್ನು ಬೆದರಿಸಲಾಗದು. ನಾವು ಆತನನ್ನು ಹೊಡೆದುರುಳಿಸಿದ್ದೇವೆ' ಎಂದು ಪ್ರಕಟಿಸಿತ್ತು. ಅದನ್ನು ಖಚಿತಪಡಿಸಿದ್ದ ಹಿಜ್ಬುಲ್ಲಾ, 'ನಸ್ರಲ್ಲಾ ಅವರೂ, ತಮ್ಮ ಇತರ ಹುತಾತ್ಮರನ್ನು ಹಿಂಬಾಲಿಸಿದ್ದಾರೆ' ಎಂದಿತ್ತು.
ಬಳಿಕ, ನಯಮ್ ಅವರನ್ನು ಹೊಸ ನಾಯಕರನ್ನಾಗಿ ಹಿಜ್ಬುಲ್ಲಾ ಘೋಷಿಸಿತ್ತು.
ನಾಯಕನಾದ ಬಳಿಕ ಮೊದಲ ಭಾಷಣ ಮಾಡಿರುವ ಕ್ವಾಸೆಮ್, 'ನಮ್ಮ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಅವರ ಕಾರ್ಯಸೂಚಿಯನ್ನು ಮುಂದುವರಿಸುವುದೇ ನನ್ನ ಕರ್ತವ್ಯವಾಗಿದೆ' ಎಂದಿದ್ದಾರೆ. ಆ ಮೂಲಕ, ನಸ್ರಲ್ಲಾ ರೂಪಿಸಿರುವ ಯುದ್ಧ ಯೋಜನೆಯನ್ನು ಪೂರ್ಣಗೊಳಿಸುವ ಪ್ರತಿಜ್ಞೆ ಮಾಡಿದ್ದಾರೆ.
'ಇರಾನ್ ನಮ್ಮ ಯೋಜನೆಗಳನ್ನು ಬೆಂಬಲಿಸಲಿದೆ. ಅದಕ್ಕೆ ಬದಲಿಯಾಗಿ ನಮ್ಮಿಂದ ಏನನ್ನೂ ಕೇಳಿಲ್ಲ' ಎಂದಿರುವ ಅವರು, 'ನಾವು ಯಾರ ಪರವಾಗಿ ಅಥವಾ ಯಾರದ್ದೋ ಯೋಜನೆಗಾಗಿ ಹೋರಾಡುವುದಿಲ್ಲ. ನಾವು ಲೆಬನಾನ್‌ಗಾಗಿ ಹೋರಾಡುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.
'ನಾವು ಹಲವು ದಿನಗಳ ವರೆಗೆ, ಹಲವು ವಾರ - ತಿಂಗಳುಗಳ ವರೆಗೆ ಹೋರಾಟ ನಡೆಸಬಲ್ಲೆವು' ಎಂದು ಹೇಳಿಕೊಂಡಿರುವ ಅವರು, 'ಒಂದು ವೇಳೆ, ಯುದ್ಧ ನಿಲ್ಲಿಸಲು ಇಸ್ರೇಲ್ ಬಯಸಿದರೆ, ನಾವೂ ಒಪ್ಪಿಕೊಳ್ಳುತ್ತೇವೆ. ಆದರೆ, ಒಂದಿಷ್ಟು ಷರತ್ತುಗಳನ್ನು ಇರಿಸುತ್ತೇವೆ' ಎಂದಿದ್ದಾರೆ.