ಲಖನೌ: ಸರ್ಕಾರದ ಹೊರಗುತ್ತಿಗೆ ಹಾಗೂ ಗುತ್ತಿಗೆ ಆಧಾರದ ಉದ್ಯೋಗಿಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಜಾರಿಗೊಳಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧಾರ ಕೈಗೊಂಡಿದೆ.
ಲಖನೌ: ಸರ್ಕಾರದ ಹೊರಗುತ್ತಿಗೆ ಹಾಗೂ ಗುತ್ತಿಗೆ ಆಧಾರದ ಉದ್ಯೋಗಿಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಜಾರಿಗೊಳಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧಾರ ಕೈಗೊಂಡಿದೆ.
ರಾಜ್ಯದ 10 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಮೇಲೆ ಕಣ್ಣಿಟ್ಟು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ಮೂಲಗಳ ಪ್ರಕಾರ, ಈ ಪ್ರಸ್ತಾಪವನ್ನು ಮುಂದಿನ ಕೆಲವೇ ದಿನಗಳಲ್ಲಿ ನಡೆಯಲಿರುವ ಸಚಿವ ಸಂಪುಟದಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಲು ನಿರ್ಧರಿಸಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಶೇಕಡ 21 ಹಾಗೂ ಶೇ 2 ಹಾಗೂ ಹಿಂದುಳಿದ ವರ್ಗದ ಸಮುದಾಯಗಳಿಗೆ ಶೇಕಡಾ 27ರಷ್ಟು ಮೀಸಲಾತಿ ನೀಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿತ್ತು. ಇದಾದ ಬಳಿಕ ನಡೆದ ಸಭೆಯಲ್ಲಿ ಬಿಜೆಪಿಯ ಹಲವು ಸಚಿವರು ಹಾಗೂ ಮುಖಂಡರು ಗುತ್ತಿಗೆ ಆಧಾರಿತ ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿದ್ದರು. ಈ ವಿಚಾರದಲ್ಲಿ ವಿಳಂಬ ಮಾಡಿದ್ದರಿಂದ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುವಂತಾಯಿತು ಎಂದು ಅಭಿಪ್ರಾಯಪಟ್ಟಿದ್ದರು.
ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಕೇಂದ್ರ ಸಚಿವೆ ಹಾಗೂ ಅಪ್ನಾದಳದ ನಾಯಕಿ ಅನುಪ್ರಿಯಾ ಪಟೇಲ್ ಕೂಡ ಮೀಸಲಾತಿ ವಿಚಾರದಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಒತ್ತಾಯಿಸಿದ್ದರು.