ಕೋಲ್ಕತ: ಆರ್‌ಜಿ ಕರ್ (RG Kar Case) ಆಸ್ಪತ್ರೆಯಲ್ಲಿ ತಮ್ಮ ಸಹೋದ್ಯೋಗಿ, ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಿಯ ವೈದ್ಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಇದೀಗ ಆರನೇ ದಿನಕ್ಕೆ ಕಾಲಿಟ್ಟಿದ್ದು, ನ್ಯಾಯಕ್ಕಾಗಿ ಕೈಗೊಂಡಿರುವ ಈ ಉಪವಾಸ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ನಿಲಿಸುವುದಿಲ್ಲ ಎಂದು ಜೂನಿಯರ್ ಡಾಕ್ಟರ್ಗಳು ಪಟ್ಟುಹಿಡಿದಿದ್ದಾರೆ.
ಈ ಮಧ್ಯೆ ಪ್ರತಿಭಟನಾನಿರತ ವೈದ್ಯರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಭಾನುವಾರದಿಂದ ನಿರಂತರವಾಗಿ ಉಪವಾಸ ಕೈಗೊಂಡ ಕಾರಣ ಅನಿಕೇತ್ ಮಹತೋ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದು, ಗುರುವಾರ (ಅ.10) ತಡರಾತ್ರಿ ಆರ್‌ಜಿ ಕರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ, ತುರ್ತು ಚಿಕಿತ್ಸೆ ಕೊಡಿಸಲಾಗಿದೆ. ಮಹತೋ ಅವರ ಚಿಕಿತ್ಸೆಯ ಮೇಲ್ವಿಚಾರಣೆಗೆ ಐದು ಸದಸ್ಯರ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಕರೆದುಕೊಂಡು ಬಂದಾಗ ಅವರ ಸ್ಥಿತಿ ಬಹಳ ಚಿಂತಾಜನಕವಾಗಿತ್ತು. ಸದ್ಯದ ಮಟ್ಟಿಗೆ ಆಕ್ಸಿಜನ್ ಮತ್ತು ಅಗತ್ಯ ಚಿಕಿತ್ಸೆಯನ್ನು ನೀಡಲಾಗಿದೆ. ಊಟ ಮಾಡದೆ, ನೀರು ಕುಡಿಯದೆ ಇರುವುದು ಈ ಸ್ಥಿತಿಗೆ ಕಾರಣ ಎಂದು ಆಸ್ಪತ್ರೆಯ ಪ್ರಭಾರ ಸಿಸಿಯು ಡಾ. ಸೋಮ ಮುಖೋಪಾಧ್ಯಾಯ ತಿಳಿಸಿದ್ದಾರೆ.
ನಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಈಡೇರಿಸುವವರೆಗೂ ಈ ಉಪವಾಸ ಸತ್ಯಾಗ್ರಹ ಹೀಗೆ ಮುಂದುವರಿಯುತ್ತದೆ. ನಿರಂತರ ಉಪವಾಸದಲ್ಲಿರುವ ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಇತರ ಇಬ್ಬರು ಕಿರಿಯ ವೈದ್ಯರ ಆರೋಗ್ಯ ಸ್ಥಿತಿ ಕೂಡ ಹದಗೆಟ್ಟಿದೆ. ಪರಿಸ್ಥಿತಿ ಏನೇ ಇದ್ದರೂ ನಾವು ಉಪವಾಸ ಸತ್ಯಾಗ್ರಹವನ್ನು ಮಾತ್ರ ಹಿಂಪಡೆಯುವುದಿಲ್ಲ. ಇನ್ನು ಕೆಲವರು ಇಂದು ನಡೆಯಲಿರುವ ಉಪವಾಸ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಆದ್ರೆ, ಇಲ್ಲಿರುವ ಒಬ್ಬ ವೈದ್ಯನಿಗೆ ಏನಾದರೂ ತೊಂದರೆ ಆದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂಬುದು ಅವರ ಗಮನದಲ್ಲಿರಲಿ ಎಂದು ವೈದ್ಯ ಹಾಲ್ಡರ್ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.