ಚೆನ್ನೈ (PTI): ಮೈಸೂರು- ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲು ಶನಿವಾರ (ಅ.11) ರಾತ್ರಿ ತಮಿಳುನಾಡಿನ ಕವರೈಪೆಟ್ಟೈ ಸಮೀಪ ಗೂಡ್ಸ್ ರೈಲಿಗೆ ಡಿಕ್ಕಿಯಾದ ಪರಿಣಾಮ 13 ಬೋಗಿಗಳು ಹಳಿ ತಪ್ಪಿದ್ದು, ಅವಘಡದಲ್ಲಿ ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಅಪಘಾತ ಸಂದರ್ಭದಲ್ಲಿ ರೈಲಿನಲ್ಲಿ 1,360 ಪ್ರಯಾಣಿಕರಿದ್ದು, ರೈಲು ಗಂಟೆಗೆ 75 ಕಿ.ಮೀ ವೇಗದಲ್ಲಿ ಸಾಗುತ್ತಿತ್ತು. ಪೊನ್ನೇರಿ ನಿಲ್ದಾಣದಿಂದ ಹೊರಟ ಬಳಿಕ ರೈಲಿಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು ಎಂದು ರೈಲ್ವೆ ತಿಳಿಸಿದೆ.
ಎರಡು ರೈಲುಗಳು ಡಿಕ್ಕಿಯಾದ ರಭಸಕ್ಕೆ ಗೂಡ್ಸ್ ರೈಲಿಗೆ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ ಅದನ್ನು ಆರಿಸಲಾಯಿತು ಎಂದು ಇಲಾಖೆ ಹೇಳಿದೆ.
ರೈಲಿನಲ್ಲಿದ್ದ ಪ್ರಯಾಣಿಕರನ್ನು ಬಸ್ ಮೂಲಕ ಪೊನ್ನೇರಿಗೆ ಕರೆದೊಯ್ದು, ನಂತರ ಅಲ್ಲಿಂದ ಚೆನ್ನೈಗೆ ಕರೆದೊಯ್ಯಲಾಯಿತು. ದರ್ಭಾಂಗದತ್ತ ಹೊರಟಿದ್ದ ಪ್ರಯಾಣಿಕರನ್ನು ವಿಶೇಷ ರೈಲಿನಲ್ಲಿ ಶನಿವಾರ ಬೆಳಿಗ್ಗೆ ಕಳುಹಿಸಲಾಯಿತು. ಪ್ರಯಾಣಿಕರಿಗೆ ಆಹಾರದ ಪೊಟ್ಟಣಗಳು ಮತ್ತು ನೀರನ್ನು ನೀಡಲಾಗಿತ್ತು ಎಂದು ಹೇಳಿದೆ.
ರೈಲ್ವೆ ಆಯುಕ್ತರಿಂದ ಪರಿಶೀಲನೆ:
'ರೈಲು ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ ಅವರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ರೈಲು ಹಳಿಗಳು, ಬ್ಲಾಕ್‌ಗಳು, ಸಿಗ್ನಲ್‌ಗಳು ವಿದ್ಯುತ್‌ಚಾಲಿತ ಇಂಟರ್‌ಲಾಕಿಂಗ್ ವ್ಯವಸ್ಥೆ, ಕಂಟ್ರೋಲ್ ಪ್ಯಾನಲ್‌ಗಳು ಮತ್ತಿತರ ಪ್ರಮುಖ ಅಂಶಗಳನ್ನು ಪರಿಶೀಲಿಸಿದ್ದಾರೆ' ಎಂದು ರೈಲ್ವೆಯ ದಕ್ಷಿಣ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಸೇಂಥಮಿಲ್ ಸೆಲ್ವನ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅವಘಡ ನಂತರ ಶನಿವಾರ ಈ ಮಾರ್ಗದಲ್ಲಿ ಸಾಗುವ ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿತ್ತು.
ಘಟನಾ ಸ್ಥಳದಲ್ಲಿ ಹಳಿಗಳ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದ್ದು, ಸೋಮವಾರ ಬೆಳಿಗ್ಗೆವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್), ತಮಿಳುನಾಡು ಅಗ್ನಿಶಾಮಕ ದಳ, ರಾಜ್ಯ ಪೊಲೀಸ್ ಪಡೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಹಳಿತಪ್ಪಿ ಉರುಳಿ ಬಿದ್ದ ಬೋಗಿಗಳನ್ನು ತೆರವು ಮಾಡಲು ಭಾರೀ ಗಾತ್ರದ ಐದು ಅರ್ಥ್ ಮೂವರ್ಸ್, 3 ಜೆಸಿಬಿಗಳು, ಕ್ರೇನ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ತೀವ್ರವಾಗಿ ಗಾಯಗೊಂಡ ಮೂವರನ್ನು ಸ್ಟ್ಯಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮತ್ತು ಅಲ್ಪ ಪ್ರಮಾಣದಲ್ಲಿ ಗಾಯಗೊಂಡವರನ್ನು ಪೊನ್ನೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಯಮದ ಪ್ರಕಾರ ಅವರಿಗೆ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಈ ಮಧ್ಯೆ ತಮಿಳುನಾಡು ಉಪ ಮುಖ್ಯಮಂತ್ರಿ ಉಧಯನಿಧಿ ಸ್ಟಾಲಿನ್ ಅವರು ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಹಳಿ ತಪ್ಪಿದ ಬೋಗಿಗಳ ತೆರವು ಕಾರ್ಯ ನಡೆಯಿತು -ಪಿಟಿಐ ಚಿತ್ರಅವಘಾತ ಸಂಭವಿಸಿದ್ದು ಹೇಗೆ?
'ರೈಲು ಚೆನ್ನೈನಿಂದ ಹೊರಟ ನಂತರ ಮುಖ್ಯ ಲೈನ್‌ನಲ್ಲಿ ಸಾಗಲು ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಲೋಕೊ ಪೈಲಟ್ ಸಿಗ್ನಲ್ ಅನುಸರಿಸುತ್ತಿದ್ದರು. ಹೀಗಿದ್ದೂ ಮುಖ್ಯ ಲೈನ್‌ನಲ್ಲಿ ಹೋಗುವ ಬದಲಾಗಿ ಲೂಪ್ ಲೈನ್‌ಗೆ ರೈಲಿನ ಮಾರ್ಗ ಬದಲಾಗಿದೆ. ನಂತರ ಅದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಘಟನೆಗೆ ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ' ಎಂದು ದಕ್ಷಿಣ ವಿಭಾಗದ ರೈಲ್ವೆ ಜನರಲ್ ಮ್ಯಾನೇಜರ್ ಆರ್.ಎನ್.ಸಿಂಗ್ ತಿಳಿಸಿದರು. ಘಟನೆಯು ಒಡಿಶಾದ ಬಾಲೇಶ್ವರದಲ್ಲಿ 2023ರಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಹೋಲಿಕೆಯಾಗುವಂತಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮುಖ್ಯ ಲೈನ್‌ನಲ್ಲಿ ಸಾಗಲು ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಆದರೆ ಅದು ಲೂಪ್ ಲೈನ್‌ನಲ್ಲಿ ಸಾಗಿದ್ದರಿಂದ ಅಪಘಾತ ಸಂಭವಿಸಿತ್ತು. ಬಾಲೇಶ್ವರದಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಶಾಲಿಮಾರ್ ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲಿನ ನಡುವೆ ಡಿಕ್ಕಿ ಸಂಭವಿಸಿ 296 ಮಂದಿ ಮೃತಪಟ್ಟಿದ್ದರು ಮತ್ತು 1200 ಜನರು ಗಾಯಗೊಂಡಿದ್ದರು.
ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಜೀವಗಳು ಬೇಕು: ರಾಹುಲ್
ನವದೆಹಲಿ (ಪಿಟಿಐ): ತಮಿಳುನಾಡು ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಶನಿವಾರ ತರಾಟೆಗೆ ತೆಗೆದುಕೊಂಡರು. ಹಲವು ಅಪಘಾತಗಳಲ್ಲಿ ಅಸಂಖ್ಯಾತ ಜನರು ಜೀವ ಕಳೆದುಕೊಂಡರೂ ಕೇಂದ್ರ ಸರ್ಕಾರ ಪಾಠ ಕಲಿತಿಲ್ಲ. ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಕುಟುಂಬಗಳು ಬಲಿಯಾಗಬೇಕು ಎಂದು 'ಎಕ್ಸ್'ನಲ್ಲಿ ಕಿಡಿಕಾರಿದರು. ಇಂಥ ಅವಘಡಗಳಿಗೆ ಉನ್ನತ ಮಟ್ಟದವರೇ ಹೊಣೆಗಾರರಾಗುತ್ತಾರೆ ಎಂದು ಹೇಳಿದರು.