ನವದೆಹಲಿ: ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 149ನೇ ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ನಮನ ಸಲ್ಲಿಸಿದ್ದಾರೆ.
'ಉಕ್ಕಿನ ಮನುಷ್ಯ' ಎಂದೇ ಬಿರುದಾಕಿಂತರಾಗಿರುವ ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ಪ್ರತಿ ವರ್ಷ 'ರಾಷ್ಟ್ರೀಯ ಏಕತಾ ದಿನ' ಎಂದು ಆಚರಿಸಲಾಗುತ್ತದೆ.
ಇಲ್ಲಿನ ಪಟೇಲ್ ಚೌಕದಲ್ಲಿರುವ ಪಟೇಲರ ಪ್ರತಿಮೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಸಂಸದೆ ಬಾನ್ಸುರಿ ಸ್ವರಾಜ್ ಗೌರವ ಸಲ್ಲಿಸಿದ್ದಾರೆ. ಗುಜರಾತ್‌ನ ಕೆವಾಡಿಯಾ ಬಳಿಯ ಏಕತಾ ಪ್ರತಿಮೆ ಬಳಿ ತೆರಳಿ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಿದ್ದಾರೆ.
'ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ನನ್ನ ನಮನಗಳು. ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವುದು ಅವರ ಜೀವನದ ಪ್ರಮುಖ ಆದ್ಯತೆಯಾಗಿತ್ತು. ಅವರ ವ್ಯಕ್ತಿತ್ವ ಮತ್ತು ಕೆಲಸ ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ' ಎಂದು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
1875 ರಲ್ಲಿ ಗುಜರಾತ್‌ನಲ್ಲಿ ಜನಿಸಿದ ಪಟೇಲ್ ಅವರು ವಕೀಲರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರಾಗಿ ಮತ್ತು ಮಹಾತ್ಮ ಗಾಂಧಿಯವರ ಸಹವರ್ತಿಯಾಗಿ ಹೊರಹೊಮ್ಮಿದರು. ಪಟೇಲ್ ಅವರು ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿಯಾಗಿದ್ದರು. ನೂರಾರು ರಾಜಪ್ರಭುತ್ವದ ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ಒಂದುಗೂಡಿಸಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.
ರಾಷ್ಟ್ರೀಯ ಏಕತಾ ದಿನದ ಇತಿಹಾಸ:
ವಿವಿಧ ರಾಜಮನೆತನಗಳ ಆಡಳಿತದಲ್ಲಿದ್ದ ಒಟ್ಟು 562 ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ್ದ ಪಟೇಲ್, ಆಧುನಿಕ ಭಾರತವನ್ನು ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ದೇಶದ ಏಕತೆಗಾಗಿ ಪಟೇಲ್ ನೀಡಿದ ಕೊಡುಗೆಯನ್ನು ಸ್ಮರಿಸಲು, ಅವರ ಜನ್ಮದಿನವಾದ ಅ.31ರಂದು 'ರಾಷ್ಟ್ರೀಯ ಏಕತಾ ದಿನ'ವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಲ್ಲಿ ತೀರ್ಮಾನ ತೆಗೆದುಕೊಂಡಿತ್ತು. ಅಂದಿನಿಂದ ಪ್ರತಿ ವರ್ಷ ಅ.31ರಂದು ದೇಶಾದ್ಯಂತ 'ರಾಷ್ಟ್ರೀಯ ಏಕತಾ ದಿನ'ವನ್ನು ಆಚರಿಸಲಾಗುತ್ತದೆ.