ಕೋಲ್ಕತ್ತ: 2023-24ನೆಯ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ರಾಜ್ಯಕ್ಕೆ ದೊರೆತ ₹1.17 ಲಕ್ಷ ಕೋಟಿ ಹಣವನ್ನು ಹೇಗೆ ಖರ್ಚು ಮಾಡಲಾಯಿತು ಎಂಬ ವಿವರ ಒದಗಿಸುವಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಜ್ಯ ಸರ್ಕಾರವು ಮಹಾಲೇಖಪಾಲರು (ಸಿಎಜಿ) ಸಿದ್ಧಪಡಿಸಿದ ಹಲವು ವರದಿಗಳನ್ನು ರಾಜ್ಯದ ವಿಧಾನಸಭೆಯಲ್ಲಿ ಮಂಡಿಸದೆ, ಸಂವಿಧಾನದ ನಿರ್ದೇಶನಗಳನ್ನು ಉಲ್ಲಂಘಿಸಿದೆ ಎಂಬ ಮಾಹಿತಿ ಪಡೆದ ರಾಜ್ಯಪಾಲರು ಈ ವಿವರ ಕೋರಿ ಪತ್ರ ಬರೆದಿದ್ದಾರೆ ಎಂದು ರಾಜಭವನದ ಉನ್ನತ ಮೂಲಗಳು ತಿಳಿಸಿವೆ.
'ಕೇಂದ್ರದಿಂದ ಬಂದಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳಿವೆ. ರಾಜ್ಯದ ಹಣಕಾಸಿನ ಪರಿಸ್ಥಿತಿಯು ಹಲವು ಸವಾಲುಗಳನ್ನು ಎದುರಿಸುತ್ತಿದೆ' ಎಂದು ರಾಜ್ಯಪಾಲರು ಬರೆದಿರುವ ಪತ್ರವನ್ನು ಉಲ್ಲೇಖಿಸಿ ಮೂಲವೊಂದು ತಿಳಿಸಿದೆ.
2018-19ನೆಯ ಹಣಕಾಸು ವರ್ಷದಲ್ಲಿ ರಾಜ್ಯದ ವಿತ್ತೀಯ ಕೊರತೆಯು ₹33,500 ಕೋಟಿ ಇದ್ದುದು, 2022-23ರಲ್ಲಿ ₹49 ಸಾವಿರ ಕೋಟಿಗೆ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ರಾಜ್ಯದ ಜಿಡಿಪಿ ಮತ್ತು ಸಾಲದ ನಡುವಿನ ಅನುಪಾತವು ಶೇ 35.69 ಇದ್ದುದು, ಶೇ 37ಕ್ಕೆ ಹೆಚ್ಚಳವಾಗಿದೆ ಎಂಬುದನ್ನು ರಾಜ್ಯಪಾಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಿಎಜಿ ನೀಡಿರುವ ಆರು ವರದಿಗಳನ್ನು ವಿಧಾನಸಭೆಯಲ್ಲಿ ಮಂಡಿಸಿಲ್ಲ ಎನ್ನಲಾಗಿದೆ. ಹಣಕಾಸಿನ ವಿಚಾರದಲ್ಲಿ ವಿವೇಕವನ್ನು ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು, ರಾಜ್ಯದ ಹಣಕಾಸಿನ ಪರಿಸ್ಥಿತಿ ಕುರಿತು ಶ್ವೇತಪತ್ರವೊಂದನ್ನು ಹೊರಡಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.