ನವದೆಹಲಿ: ಭಾರತಕ್ಕೆ ಆಗಮಿಸಿರುವ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಭೇಟಿಯಾದರು.
ಮುಯಿಜು ಅವರು ದ್ವಿಪಕ್ಷೀಯ ಸಂಬಂಧ ವೃದ್ಧಿ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲು ಭಾನುವಾರದಿಂದ ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಮಾಲ್ದೀವ್ಸ್‌ನ ಸಚಿವರು ಮೋದಿ ಬಗ್ಗೆ ನೀಡಿರುವ ಹೇಳಿಕೆ ಮತ್ತು ಮುಯಿಜು ಅವರು ಚೀನಾ ಪರ ಒಲವು ಹೊಂದಿದ್ದಾರೆ ಎನ್ನುವ ಕಾರಣಗಳು ಭಾರತ ಮತ್ತು ಮಾಲ್ದೀವ್ಸ್ ನಡುವಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸಿತ್ತು.
ಈಗ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಭಾರತಕ್ಕೆ ಆಗಮಿಸಿದ ಮುಯಿಜುಗೆ ದ್ವೀಪದ ರಾಷ್ಟ್ರದ ಅಭಿವೃದ್ಧಿಗೆ ನೆರವು ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.
ಮಾಲ್ದೀವ್ಸ್ ಗಂಭೀರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾರಣ ಮತ್ತೊಂದು ವರ್ಷ 50 ಮಿಲಿಯನ್ ಯುಎಸ್‌ಡಿ ಹಣಕಾಸು ನೆರವು ನೀಡುವುದಾಗಿ ಹೇಳಿದ್ದಾರೆ. ಜತೆಗೆ ಕರೆನ್ಸಿ ವಿನಿಯಮಯದ ಭಾಗವಾಗಿ ಮಾಲ್ದೀವ್ಸ್ ನೀಡಲಿರುವ 400 ದಶಲಕ್ಷ ಅಮೆರಿಕನ್ ಡಾಲರ್ ಹಣವನ್ನು ಪಡೆದು ₹30 ಶತಕೋಟಿ ಮೌಲ್ಯದ ಭಾರತೀಯ ಕರೆನ್ಸಿ ನೀಡಲು ಒಪ್ಪಿಗೆ ನೀಡಿದ್ದಾರೆ.